ಬೆಂಗಳೂರು, ಮೇ ೨೧: ಕೊರೊನಾ ವೈರಸ್‌ನ ಎರಡನೇ ಅಲೆಯಲ್ಲಿ ನಲುಗಿರುವ ಸಂದರ್ಭದಲ್ಲಿ ಕೆಲ ಖಾಸಗಿ ಆಂಬ್ಯುಲೆನ್ಸ್ಗಳು ಬೇಕಾ ಬಿಟ್ಟಿ ಬಾಡಿಗೆಗಳನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಉದ್ದೇಶದಿಂದ ಖಾಸಗಿ ಆಂಬ್ಯುಲೆನ್ಸ್ಗಳಿಗೆ ರಾಜ್ಯಸರ್ಕಾರ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ.
ಎರಡು ವಿಭಾಗದಲ್ಲಿ ಆಂಬ್ಯುಲೆನ್ಸ್ಗಳಿಗೆ ದರವನ್ನು ನಿಗದಿ ಪಡಿಸಲಾಗಿದ್ದು, ಸಾಮಾನ್ಯ ಆಂಬ್ಯುಲೆನ್ಸ್ಗಳಿಗೆ (ಪೇಶೆಂಟ್ ಟ್ರಾನ್ಸ್ಪೋರ್ಟ್ ಆಂಬ್ಯುಲೆನ್ಸ್)ಮೊದಲ ೧೦ ಕಿ.ಮೀಟರ್‌ಗಳಿಗೆ ೧೫೦೦ ರೂ.ಗರಿಷ್ಟದರವನ್ನು ನಿಗದಿಗೊಳಿಸಲಾಗಿದೆ. ೧೦ ನಂತರದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ ೧೨೦ ರೂಪಾಯಿ ನಿಗದಿಗೊಳಿಸಲಾಗಿದೆ. ಇದು ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೀಲ್ಡ್, ಸ್ಯಾನಿಟೈಸರ್, ಡ್ರೈವರ್ ಈ ಎಲ್ಲವನ್ನೂ ಒಳಗೊಂಡಿರುತ್ತದೆ. ಅಲ್ಲದೆ ಗಂಟೆಗೆ ೨೦೦ ರೂಪಾಯಿ ವೈಟಿಂಗ್ ಚಾರ್ಜ್ ಎಂದು ನಿಗದಿಗೊಳಿಸಲಾಗಿದೆ.
ಇನ್ನು ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್(ಬಿಎಲ್‌ಎಸ್)ಗಳಿಗೆ ಮೊದಲ ೧೦ ಕಿಮೀಗಳಿಗೆ ೨೦೦೦ ರೂಪಾಯಿ ನಿಗದಿಗೊಳಿಸಿದ್ದು ೧೦ ಕಿ.ಮೀ ನಂತರದ ಪ್ರಯಾಣಕ್ಕೆ ಪ್ರತಿ ಕಿಮೀಗೆ ಗರಿಷ್ಟ ೧೨೦ ರೂಪಾಯಿ ವಿಧಿಸಲು ಅವಕಾಶ ನೀಡಲಾಗಿದೆ. ಇದು ಕೂಡದು ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೀಲ್ಡ್, ಸ್ಯಾನಿಟೈಸರ್, ಡ್ರೈವರ್ ಈ ಎಲ್ಲವನ್ನೂ ಒಳಗೊಂಡಿರುತ್ತದೆ. ವೈಟಿಂಗ್ ಚಾರ್ಚ್ ಗಂಟೆಗೆ ೨೫೦ ರೂ ನಿಗದಿಗೊಳಿಸಿದೆ.
ಈ ದರ ನಿಗದಿಪಡಿಸಲು ನೋಂದಣಿ ವೆಚ್ಚ, ವಿಮಾ ವೆಚ್ಚ, ಸಿಬ್ಬಂದಿ ವೆಚ್ಚ, ಟೈರ್‌ಗಳ ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಆದೇಶ ಪ್ರತಿಯಲ್ಲಿ ವಿವರಿಸಲಾಗಿದೆ. ಉಪಮುಖ್ಯಮಂತ್ರಿ, ಸಾರಿಗೆ ಸಚಿವರು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈಗ ಅಧಿಕೃತವಾಗಿ ಆದೇಶ ಹೊರಬಿದ್ದಿದೆ.
ಹಣ ಪಡೆದರೆ ಚಾಲನಾ ಪರವಾನಿಗೆ ರದ್ದು
ಶುಕ್ರವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಆರ್.ಅಶೋಕ್, ಶವ ಸಾಗಿಸುವ ಆಂಬ್ಯುಲೆನ್ಸ್ ಸೇವೆಯನ್ನು ಉಚಿತವಾಗಿ ನೀಡಲಾಗುವುದು. ಯಾರೂ ಕೂಡ ಹಣ ಪಡೆಯುವಂತಿಲ್ಲ. ಅಸ್ಥಿ ನೀಡುವಾಗಲೂ ಹಣ ಪಡೆಯುವಂತಿಲ್ಲ. ಚಾಲಕರು ಹಣ ಪಡೆದರೆ ಮೂರು ವರ್ಷ ಚಾಲನಾ ಪರವಾನಿಗೆ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.