ಮಂಗಳೂರು, ಮೇ 20: ಕ್ರೈಸ್ತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಮುಖಂಡ, ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೋಜ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲಸಿಕೆ ಪಡೆಯದಂತೆ ಕ್ರೈಸ್ತ ಸಮುದಾಯಕ್ಕೆ ಚರ್ಚ್ ಕಡೆಯಿಂದ ಸೂಚನೆ ನೀಡಲಾಗಿದೆ ಎಂದು ಸಂಸದೆ ಶೋಭಾ ಹೇಳಿಕೆ ನೀಡಿದ್ದಾಗಿ ಸುದ್ದಿಯಾಗಿತ್ತು. ಈ ಬಗ್ಗೆ ಕ್ರೈಸ್ತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮಾಜಿ ಎಂಎಲ್ಸಿ ಐವನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ನಿಯೋಗ ಕಮಿಷನರನ್ನು ಭೇಟಿಯಾಗಿ ದೂರು ನೀಡಿದ್ದಾರೆ.
ಇದೇ ವೇಳೆ, ಮಾತನಾಡಿರುವ ಐವಾನ್ ಡಿ’ಸೋಜ, ಲಸಿಕೆ ಕೊಡುವ ಯೋಗ್ಯತೆ ಇವರಿಗೆ ಇಲ್ಲ. ಆದರೂ ಕ್ರೈಸ್ತ ಸಮುದಾಯದ ಅತಿ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಸಮುದಾಯಕ್ಕೆ ಸೇರಿದ ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೋವಿಡ್ ಕೇರ್ ಸೆಂಟರ್ ಗಳನ್ನೂ ಮಾಡಲಾಗಿದೆ. ಶೋಭಾ ಕರಂದ್ಲಾಜೆ ಒಂದು ಸಮುದಾಯವನ್ನು ಕೀಳಾಗಿ ಬಿಂಬಿಸಿ ಹೇಳಿಕೆ ನೀಡಿದ್ದಾರೆ. ಇವರ ಕಚೇರಿಯ ಮುಂದೆ ಹತ್ತು ಸಾವಿರ ಮಂದಿಯನ್ನು ಸೇರಿಸಿ ಲಸಿಕೆ ಕೊಡಿ ಎಂದು ಪ್ರತಿಭಟನೆ ಮಾಡುತ್ತೇವೆ. ಇವರಿಗೆ ಲಸಿಕೆ ಕೊಡಿಸುವ ತಾಕತ್ತು ಇದೆಯಾ, ನೋಡೋಣ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಐವನ್ ಡಿ’ಸೋಜ ಹೇಳಿಕೆ ನೀಡಿದ್ದು, ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ಆಗಿದೆ. ಮಂಗಳೂರು ಡಯಾಸಿಸ್ ಅಡಿ ದ.ಕ. ಜಿಲ್ಲೆಯಾದ್ಯಂತ 40 ಕ್ಕೂ ಹೆಚ್ಚು ವಿವಿಧ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಗುಲ್ಬರ್ಗ, ಬೆಂಗಳೂರು, ಯಾದಗಿರಿ ಹೀಗೆ ಹಲವು ಕಡೆ ದೂರು ದಾಖಲಾಗಿದೆ.