ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಸ್ಥಳ ನೀಡದೇ ಸರ್ಕಾರ ಅವರನ್ನು ಎತ್ತಂಗಡಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಫೆ.13ರಂದೇ ಚಾಮರಾಜನಗರ ಡಿಸಿ ರವಿ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಡಾ.ಬಿ.ಸಿ.ಸತೀಶ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಬಳಿಕ ಕೆಲವು ಬೆಳವಣಿಗೆಗಳು ನಡೆದು ರವಿ ಗಡಿಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಮುಂದುವರೆದಿದ್ದರು.
ದುರಂತ ನಡೆದ ಬಳಿಕ ನಡೆದ ನ್ಯಾಯಾಂಗ ತನಿಖೆಯಲ್ಲಿ ರವಿ ಅವರ ವೈಫಲ್ಯ, ನಾಯಕತ್ವ ಪ್ರದರ್ಶಿಸುವಲ್ಲಿ ವಿಫಲರಾಗಿರುವುದರ ಕುರಿತು, ಜೊತೆಗೆ ಕೆಲ ಕಡತಗಳನ್ನು ತಿದ್ದಿರುವ ಬಗ್ಗೆಯೂ ಉಲ್ಲೇಖಿಸಿದ್ದರಿಂದ ಅವರ ವರ್ಗಾವಣೆಗೆ ಒತ್ತಡವಿತ್ತು. ಹೀಗಾಗಿ ಮೂರು ತಿಂಗಳ ಹಿಂದೆ ಮಾಡಿದ್ದ ವರ್ಗಾವಣೆ ಆದೇಶದಂತೆ ಸರ್ಕಾರ ಅವರ ಸ್ಥಾನಕ್ಕೆ ಸತೀಶ್ ನೇಮಕಗೊಳಿಸಿದೆ ಎಂದು ತಿಳಿದುಬಂದಿದೆ. ಮತ್ತೊಂದು ಮೂಲಗಳ ಪ್ರಕಾರ, ಚಾಮರಾಜನಗರ ಡಿ.ಸಿಯಾಗಿ ರವಿ ಅವರೇ ಮುಂದುವರೆಯಬೇಕೆಂದು ಕೆಲ ಬಿಜೆಪಿ ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ