Ad Widget .

ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಸುರಿದ ಆರ್ಥಿಕ ಪ್ಯಾಕೇಜ್

ಕಳೆದೆರಡು ವಾರದಿಂದ ಕೊರೊನ ಕಂಟ್ರೋಲ್ ಗಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಹೇರಿದ್ದು, ಹಲವು ವರ್ಗಗಳ ಜನರ, ಕಾರ್ಮಿಕರ ಜೀವನ ದುರ್ಬರವಾಗಿದೆ. ಹಲವಾರು ಕುಟುಂಬಗಳು ತುತ್ತು ಅನ್ನಕ್ಕಾಗಿ ಬೀದಿಗೆ ಬಂದಿದ್ದರೆ, ಮಧ್ಯಮ ವರ್ಗದ ಜನ ಅತ್ತ ನುಂಗಲೂ ಆಗದೆ, ಇತ್ತ ಉಗುಳಲೂ ಆಗದೇ ಕಷ್ಟ ಪಡುತ್ತಿದ್ದಾರೆ. ಹಲವು ಯುವಬಳಗ ಕೆಲಸ ಕಳೆದು ಬೀದಿಗೆ ಬಂದಿದ್ದು, ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂಕಷ್ಟಕ್ಕೊಳಗಾದ ವರ್ಗಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ಮೊಣಕೈಗೆ ತುಪ್ಪ ಸವರಿದಂತಾಗಿದೆ.

Ad Widget . Ad Widget .

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಪಟ್ಟಣಗಳ ಬಡ ಕೂಲಿಕಾರ್ಮಿಕರು ಕೆಲಸ ಮಾಡಲಾಗದೇ ಮತ್ತೆ ಹಳ್ಳಿಗಳಿಗೆ ತೆರಳಿದ್ದು, ಹಳ್ಳಿಯಲ್ಲೂ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಸರ್ಕಾರ ಒಂದಿಷ್ಟು ಪಡಿತರ ಹಂಚುವ ವ್ಯವಸ್ಥೆ ಮಾಡಿದ್ದರೂ, ಮತ್ಯಾವ ಸಹಾಯವನ್ನು ಮಾಡದೇ ‘ಬಂದದ್ದೆಲ್ಲಾ ಬರಲಿ’ ಎಂದು ತಟಸ್ಥವಾಗಿತ್ತು. ಲಾಕ್ ಡೌನ್ ನಿಂದ ಬಳಲಿದ ಮಂದಿ ಇಂದೋ ನಾಳೆಯೊ ಸರ್ಕಾರ ನೆರವಿಗೆ ಬರುತ್ತೆ ಅಂತ ಕಾದುಕುಳಿತಿದ್ದರು. ಸರ್ಕಾರದ ತಟಸ್ಥ ಧೋರಣೆಗೆ ವಿರೋಧ ಪಕ್ಷ, ಆಡಳಿತ ಪಕ್ಷ ಹಾಗೂ ಸಾರ್ವಜನಿಕರಲ್ಲಿ ವಿರೋಧ ಕೇಳಿಬಂದ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ 1250 ಕೋಟಿಗಳ ವಿಶೇಷ ಪ್ಯಾಕೇಜ್ ಘೋಷಿಸಿದರು. ಆದರೆ ಈ ಪ್ಯಾಕೇಜ್ ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.
ಸಿಎಂ, ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಸಹಾಯಧನ, ಹಣ್ಣು, ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ 10 ಸಾವಿರ, ಹಣ್ಣು ತರಕಾರಿ ಬೆಳೆಗೆ ಒಂದು ಹೆಕ್ಟೇರ್ ಗೆ ಕನಿಷ್ಠ 10 ಸಾವಿರ ಸಹಾಯಧನ, ಆಟೋ, ಕ್ಯಾಬ್ ಚಾಲಕ 3 ಸಾವಿರ, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ, ಅಗಸ, ಚಮ್ಮಾರ, ಕಮ್ಮಾರ ಸೇರಿದಂತೆ ಅಸಂಘಟಿತರಿಗೆ 2 ಸಾವಿರ, ರಸ್ತೆಬದಿ ವ್ಯಾಪಾರಿಗಳಿಗೆ 2 ಸಾವಿರ, ರಸ್ತೆ ಬದಿಯ ವ್ಯಾಪಾರಿಗಳಿಗೆ 2 ಸಾವಿರ, ಕಲಾವಿದರು, ಕಲಾ ತಂಡಕ್ಕೆ 3 ಸಾವಿರ ಹಾಗೂ ಸಾಲ ಮರುಪಾವತಿಗೆ 3 ತಿಂಗಳ ಅವಕಾಶ ಇದ್ದು, 3 ತಿಂಗಳ ಬಡ್ಡಿ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದರೂ ಇದು ಸಂಭವಿಸಿದ ನಷ್ಟದ ಅರ್ಧಮೊತ್ತಕ್ಕೂ ಸಮವಲ್ಲ. ಮನೆ ಬಾಡಿಗೆಯೇ ತಿಂಗಳಿಗೆ ಕಡಿಮೆ ಎಂದರೂ ಐದು ಸಾವಿರ ಇರುವಾಗ, ಈ ಮೊತ್ತ ಎಲ್ಲಿಗೆ ಸಾಕಾಗಬಹುದು. ಉದ್ಯೋಗ ನಷ್ಟಕ್ಕೆ ಪರಿಹಾರವೇನು? ಹೊಸ ಉದ್ಯೋಗ ಸೃಷ್ಟಿ ಹೇಗೆ? ಎಂಬುದಕ್ಕೆ ಯಾವುದೇ ಉತ್ತರಗಳು ಇಲ್ಲ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ 5 ಕೆಜಿ ಅಕ್ಕಿ, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ನೀಡಿಕೆ, ಅಲ್ಲದೆ ಮೇ, ಜೂನ್ ರೇಷನ್ ಕೊಡಲಾಗುತ್ತೆ ಎಂದು ಮುಖ್ಯಮಂತ್ರಿಗಳು ಹೇಳಿದ್ದು, ಸ್ವಲ್ಪ ಮಟ್ಟಿನ ಆಶಾದಾಯಕ ಹೆಜ್ಜೆ. ಪ್ಯಾಕೇಜ್ ನಲ್ಲಿ ಕಳೆದ ವರ್ಷದಂತೆ ಲೋಪ ಆಗದಂತೆ ಕ್ರಮ ವಹಿಸುತ್ತೇವೆ ಎಂದಿರುವ ಮುಖ್ಯಮಂತ್ರಿಗಳ ಮಾತಿಗೆ ವಿರೋಧ ಪಕ್ಷಗಳು ಕಳೆದ ವರ್ಷ ಎಷ್ಟು ಮಂದಿ ಲಾಭ ಪಡೆದಿದ್ದಾರೆ ಎಂಬುದನ್ನು ಪ್ರಶ್ನಿಸಿವೆ.
ಅಲ್ಲದೇ ಆರ್ಥಿಕ ಪ್ಯಾಕೇಜ್ ನ ಪಡೆದುಕೊಳ್ಳುವಿಕೆ ಬಗ್ಗೆಯೂ ಯಾವುದೇ ಮಾರ್ಗಸೂಚಿ ಹೊರಡಿಸದಿರುವುದರಿಂದ ಅಧಿಕಾರಿಗಳು ಜನರನ್ನು ಹೈರಾಣಾಗಿಸಲು ಪ್ರಯತ್ನಿಸಬಹುದು. ಪ್ಯಾಕೇಜ್ ನಿಂದ ಹಲವು ‌ದುಡಿಯುವ ವರ್ಗದವರನ್ನು ಹೊರಗಿಟ್ಟಿರುವುದು ಕಂಡುಬಂದಿದ್ದು, ಇವರಿಗೆ ಪರಿಹಾರ‌ ದೂರದ ಮಾತು. ಲಾಕ್ ಡೌನ್ ನಿಂದ ಮಾರುಕಟ್ಟೆಯಲ್ಲಿ ಪ್ರತೀವಸ್ತುಗಳು ತುಟ್ಟಿಯಾಗಿದ್ದು, ಈ ದುಬಾರಿ ದುನಿಯಾದಲ್ಲಿ ಕೆರೆಯ ನೀರನು ಕೆರೆಗೇ ಚೆಲ್ಲಬೇಕಷ್ಟೆ ಎಂದು ‌ಜನರಾಡಿಕೊಳ್ಳುತ್ತಿದ್ದಾರೆ.

Ad Widget . Ad Widget .

ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, “ಇದ್ಯಾವುದೂ ಜನರಿಗೆ ತಲುಪುವುದಿಲ್ಲ. ಕಳೆದ ಬಾರಿಯೂ ಇಂತಹದ್ದೇ ಪ್ಯಾಕೇಜ್ ಘೋಷಣೆ ಮಾಡಿದ್ದರು. ಪಂಚಾಯಿತಿಗಳಿಗೆ ಪ್ಯಾಕೇಜ್ ನೀಡುವ ಜವಾಬ್ದಾರಿ ವಹಿಸಬೇಕು ಇಲ್ಲದಿದ್ದರೇ ಇದು ಬರಿ ಹಾಳೆಗೆ ಮಾತ್ರ ಸೀಮಿತವಾಗುತ್ತದೆ” ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ’ಇದು ಅತ್ಯಂತ ನಿರಾಶದಾಯಕ ಪ್ಯಾಕೇಜ್, ಕಳೆದ ಬಾರಿ ಮೊದಲ ಕಂತಿನಲ್ಲಿ 1, 200 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿ, ಹೂವಿನ ಬೆಳೆಗಾರರಿಗೆ ಹೆಕ್ಟೆರ್‌ಗೆ 25 ಸಾವಿರ ಘೋಷಿಸಿತ್ತು. ಆದರೆ ಅದನ್ನೂ ಈಗ 10 ಸಾವಿರಕ್ಕೆ ಇಳಿಸಿದೆ. ರಸಗೊಬ್ಬರ, ಬೆಲೆ ಹೆಚ್ಚಳದ ನಡುವೆ ಇದು ಯಾವ ರೀತಿ ರೈತರಿಗೆ ಸಹಕಾರಿ..? ಆಟೋ, ಕ್ಯಾಬ್, ಟ್ಯಾಕ್ಸಿ ಚಾಲಕರಿಗೆ ಕಳೆದ ಬಾರಿ 5000 ನೀಡಿ ಈಗ 3000 ಸಾವಿರ ಎಂದು ಘೋಷಣೆ ಮಾಡಿದ್ದಿರಿ ಇದು ನಿಜಕ್ಕೂ ಕೆಟ್ಟ ಪ್ಯಾಕೇಜ್” ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಆಟೋ ಚಾಲಕರಿಗೆ ನೀಡಿದ ಪ್ಯಾಕೇಜ್ ಬಗ್ಗೆ ಕೆಲವು ಆಟೋ ಚಾಲಕರು ಗರಂ ಆಗಿದ್ದು, ಸರ್ಕಾರಕ್ಕೇ ನಾವು 3000 ಕೊಡುತ್ತೇವೆ, ಸರಕಾರ ಆಟೋ ಓಡಿಸಲು ಅವಕಾಶ ಕೊಡಲಿ ಎಂದಿದ್ದಾರೆ.

Leave a Comment

Your email address will not be published. Required fields are marked *