ಬೆಂಗಳೂರು: ದೇಶದಲ್ಲಿ ಕೊರೊನಾ ವಿಷಮ ಪರಿಸ್ಥಿತಿಯಲ್ಲಿ ಬಿಜೆಪಿ ಹೊರತು ಬೇರಾವುದೇ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಪರಿಸ್ಥಿತಿ ನಿರ್ವಹಣೆ ಕಷ್ಟವಾಗುತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬಿಜೆಪಿ ಕರ್ನಾಟಕದ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಳೀನ್ ಕುಮಾರ್ ಕಟೀಲ್ ಸರಣಿ ಟ್ವಿಟ್ ಗಳ ಮೂಲಕ ಇಂತಹ ಹೇಳಿಕೆ ನೀಡಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿ ಸಮಯದಲ್ಲಿಯೂ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಕಟೀಲ್ ರ ಸಮರ್ಥನೆ ಈಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್, ಜನರ ತೆರಿಗೆ ಹಣವನ್ನು ವಿವೇಚನೆಯಿಂದ ಬಳಸಿದ್ದರೆ ಕೊರೊನಾ ನಿಯಂತ್ರಿಸಲು ಕಷ್ಟವಾಗುತ್ತಿರಲಿಲ್ಲ. ಕಾಂಗ್ರೆಸ್ ಗೆ ದೂರದೃಷ್ಟಿ ಇರಲಿಲ್ಲ. ದೇಶವನ್ನು ಲೂಟಿ ಮಾಡುವ ಹೊರತು ಮತ್ಯಾವ ಯೋಚನೆಯೂ ಇರಲಿಲ್ಲ ಎಂದು ಆರೋಪಿಸಿರುವ ಕಟೀಲ್ ಕೊರೊನಾ ನಿಯಂತ್ರಣ ಆಗದಿರಲು ಕಾಂಗ್ರೆಸ್ ಕಾರಣ ಎಂದು ಹರಿಹಾಯ್ದಿದ್ದಾರೆ.
ಕೋವಿಡ್ ಪರಿಹಾರ ಕಾರ್ಯದಲ್ಲಿ ಸರ್ಕಾರ ಮತ್ತು ಪಕ್ಷ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದೆ. ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಸೇರಿ ಜಿಲ್ಲೆಗಳಲ್ಲಿ ವಾರ್ ರೂಮ್ ತೆರೆದಿದ್ದೇವೆ. ಇಲ್ಲಿಗೆ ಬರುವ ಕರೆಗಳನ್ನು ಜಿಲ್ಲಾಡಳಿತ, ಉಸ್ತುವಾರಿ ಸಚಿವರಿಗೆ ತಲುಪಿಸುವ ಕೆಲಸ ಸೇರಿದಂತೆ 13 ಅಂಶಗಳನ್ನೊಳಗೊಂಡ ಸೇವೆ ಮಾಡಲಾಗುತ್ತಿದೆ ಎಂದು ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.
ಕೊರೊನ ಸಮಯದಲ್ಲಿ ಪಕ್ಷ ಮತ್ತು
ಸರ್ಕಾರ ಕೈಗೊಳ್ಳುತ್ತಿರುವ ನಿರ್ಣಯಗಳು ನೂರಕ್ಕೆ ನೂರು ಸರಿದಾರಿಯಲ್ಲಿದೆ. ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಬೇರಾವುದೇ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಪರಿಸ್ಥಿತಿ ನಿಭಾವಣೆ ಕಷ್ಟವಿತ್ತು ಎಂದವರು ಅಭಿಪ್ರಾಯ ಪಟ್ಟಿದ್ದಾರೆ
ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ನಿರ್ವಹಣೆಯ ಅಸಮರ್ಥತೆ ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಈಗ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಕೈಲಾಗದ ಮಾತಾಡುತ್ತಿದ್ದಾರೆ. ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದಾರೆ. ಭೂ ಕೈಲಾಸ ಸೃಷ್ಟಿಸುವ ಬಿಜೆಪಿ ಮಾತು ನಂಬಿ ಜನ ಅಧಿಕಾರ ನೀಡಿದ್ದಾರೆ. ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಆಕ್ರೋಶ ಹೊರಹಾಕಿರುವುದನ್ನು ಸ್ಮರಿಸಬಹುದಾಗಿದೆ.