Ad Widget .

ಆತ್ಮವಿಶ್ವಾಸಕ್ಕೆ ಪ್ರೇರಣೆ ನೀಡುವ ಮುಗುಡು ಮೀನು

ಮುಗುಡು ಮೀನು ಇಂಗ್ಲೀಷಲ್ಲಿ ‘ಕ್ಯಾಟ್ ಫಿಷ್’ ಎಂದು ಕರೆಯಲ್ಪಡುವ ಮೀನು ಅತ್ಯಂತ ವಿಚಿತ್ರವಾದ ಮೀನಾಗಿದೆ. ಈ ಮೀನಿನಿಂದ ಕಲಿಯುವುದು ಬೇಕಾದಷ್ಟಿದೆ. ಮನುಷ್ಯರಾದ ನಾವು ಚಿಕ್ಕ ಕಷ್ಟ ಬಂದಾಗಲೂ ಆತ್ಮಹತ್ಯೆ ಮಾಡಲು ಬಯಸುವ ಈ ಸಂದರ್ಭದಲ್ಲಿ ಈ ಮೀನು ಬದುಕಲು ಸ್ಫ್ಪೂರ್ತಿ ನೀಡುತ್ತದೆ.
ತುಳುನಾಡಿನಲ್ಲಿ ಇಂದಿಗೂ ಅನೇಕ ಮಂದಿ ಉಬರ್ ಹಿಡಿಯಲು ಹೋಗುತ್ತಾರೆ. ಉಬರ್ ಎಂದರೆ ತುಳುವಲ್ಲಿ ಮಳೆಗಾಲದ ಮೊದಲ ಜೋರು ಮಳೆಗೆ ಮೀನು, ಏಡಿಗಳನ್ನು ಬೇಟೆಯಾಡಲು ಹೋಗುವುದು. ಉಬರ್ ಎಂಬುದೇ ಒಂದು ರೋಚಕ ಅನುಭವ. ಅದನ್ನು ಬರೆಯುತ್ತಾ ಹೋದರೆ ಅದರ ಬಗ್ಗೆ ದೊಡ್ಡದೊಂದು ಕಾದಂಬರಿಯನ್ನೇ ಬರೆಯಬಹುದು.
ಜೂನ್ ತಿಂಗಳು ಬರುವ ಮೊದಲ ಮಳೆಗೆ ಊರಿನ ಯುವಕರೆಲ್ಲಾ ಸೇರಿಕೊಂಡು ಉಬರ್ ಹಿಡಿಯಲು ಹೋಗುತ್ತಾರೆ. ಜೋರಾಗಿ ನೆರೆ ಬಂದ್ದಿದ್ದರೆ ಉಬರ್ ಸಕ್ಸಸ್ ಎಂದೇ ಅರ್ಥ. ತೋಡಲ್ಲಿ ರಭಸವಾಗಿ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವ ಮಧ್ಯೆ ಮಗುಡು ಮೀನಿನಂತಹ ಹಲವಾರ ಮೀನುಗಳು ಸಂಚಾರ ನಡೆಸುತ್ತಿರುತ್ತದೆ. ಅದನ್ನು ಹಿಡಿಯುವುದೇ ಉಬರ್ ಹೊರಟವರ ಉದ್ದೇಶ. ಮಣ್ಣು ಮಿಶ್ರಿತ ನೀರಲ್ಲಿ ಇಂಥಾ ಮೀನುಗಳು ಕಾಣಸಿಗುವುದೇ ಇಲ್ಲ. ಅದಕ್ಕಾಗಿ ಪೆಟ್ರೋಮ್ಯಾಕ್ಸ್ ದೀಪ, ಪ್ರಖರ ಬೆಳಕು ಬೀರುವ ಟಾರ್ಚ್‌ಲೈಟ್‌ಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಅದರ ಜೊತೆಗೆ ಹರಿತವಾದ ಮಚ್ಚುಲಾಂಗುಗಳು. ಕೆಸರು ಮಿಶ್ರಿತ ತೂತುಗಳಿಂದ ಇಂಥಾ ಮೀನುಗಳು ಒಂದೊಂದಾಗಿಯೇ ಹೊರಗೆ ಬರುತ್ತಿರುತ್ತದೆ. ಇದನ್ನೇ ಕಾಯುತ್ತಿರುವ ಉಬರ್ ಹಿಡಿಯುವವರು ಮೀನು ಹೊರಬಂದ ತಕ್ಷಣ ತನ್ನ ಹರಿತವಾದ ಕತ್ತಿಯಿಂದ ಆಹುತಿ ಮಾಡಿ ಬಿಡುತ್ತಾರೆ.

Ad Widget . Ad Widget .


ಈ ಮೀನನ್ನು ಹಿಒಡಿಯುವಾಗ ಕೊಂಚ ತಪ್ಪಿದರೂ ಅದರ ಬರ್ಚಿಯಂತಹಾ ಮುಳ್ಳು ತಮ್ಮ ಕೈಗೆ ತಾಗಿ ದೊಡ್ಡದಾದ ಗಾಯಮಾಡಿ ಬಿಡಬಲ್ಲುದು. ಅಷು ಚಾಣಾಕ್ಷರು ಮಾತ್ರ ಉಬರ್ ಹಿಡಿಯಬಲ್ಲರು. ಇದರ ಬಗ್ಗೆ ಮಾಹಿತಿ ಇಲ್ಲದವರಿಗೆ ಒಂದು ಮೀನೂ ಸಿಗಲು ಸಾಧ್ಯವೇ ಇಲ್ಲ.
ಮುಗುಡು ಮೀನಿನ ಜಾತಿಗೆ ಸೇರಿದ ಮೀನುಗಳು ಪ್ರಪಂಚದ ಹಲವಾರು ಕಡೆಗಳಲ್ಲಿ ಕಾಣಸಿಗುತ್ತದೆ. ಆದರೆ ದ.ಭಾರತದ ಕರ್ನಾಟಕದ ಹಿನ್ನೀರಿನಲ್ಲಿ ಸಿಗುವ ಈ ಮೀನುಗಳೇ ಬಹಳ ಅಚ್ಚರಿದಾಯಕ ಪ್ರಾಣಿಗಳು. ನಮಗೆ ಗೊತ್ತಿರುವಂತೆ ನದಿ, ತೋಡುಗಳಲ್ಲಿ ವರ್ಷಪೂರ್ತಿ ನೀರಿರುವುದಿಲ್ಲ. ಈ ನೀರಿರದ ಸಂದರ್ಭದಲ್ಲಿ ಇದರಲ್ಲಿರುವ ಮೀನುಗಳು ಎಲ್ಲಿಗೆ ಹೋಗುತ್ತದೆ ಎಂಬ ಸಂಶಯ ನಮ್ಮನ್ನು ಕಾಡದೆ ಇರದು. ಹೌದು, ವಿಷಯ ಇಲ್ಲಿಯೇ ಇರುವುದು. ಮಳೆ ನಿಂತೊಡನೆ ತೋಡು ನದಿ, ಕೊಳಗಳಲ್ಲಿ ನೀರು ಆವಿಯಾಗಿ ಆ ಜಾಗದಲ್ಲಿ ನೀರಿತ್ತೆಂಬುದಕ್ಕೆ ಸಾಕ್ಷಿ ಸಹ ಇರುವುದಿಲ್ಲ. ಆದರೂ ಮಳೆ ಆರಂಭವಾಗುತ್ತಿದ್ದಂತೆ ಅದೇ ಜಾಗದಲ್ಲಿ ಮೀನುಗಳು ಕಾಣಸಿಗಲಾರಂಭಿಸುತ್ತದೆ. ಅಷ್ಟೇ ಏಕೆ ಅದರೊಂದಿಗೆ ಮೀನಿನ ಮರಿಗಳೂ ಕಾಣಿಸಿಕೊಂಡು ಅಲ್ಲೊಂದು ದೊಡ್ಡ ಸಂಸಾರದ ಅನಾವರಣವಾಗುತ್ತದೆ. ನೀರಿರುವವರೆಗೆ ಸಂತಸದಿಂದ ಬದುಕುವ ಈ ಜೀವಿಗಳ ಹೋರಾಟಮಯ ಜೀವನ ಆರಂಭವಾಗುವುದೇ ಇಲ್ಲಿಂದ.
ನೀರಿರುವ ತಾಣಗಳಲ್ಲಿ ನೀರು ಆವಿಯಾಗುತ್ತಿದ್ದಂತೆ ಕೊಕ್ಕರೆ, ಮಿಂಂಚುಳ್ಳಿ ನೀರುಕಾಗೆ ಮುಂತಾದ ಪಕ್ಷಿಗಳು ಅಲ್ಲಿರುವ ಮೀನುಗಳನ್ನು ಸ್ವಾಹಾ ಮಾಡಲು ಶುರುಮಾಡುತ್ತದೆ. ಇದರ ಬಾಯಿಗೆ ಆಹುತಿಯಾಗಿ ಅಳಿದುಳಿದ ಮೀನುಗಳೇ ಮುಂದಿನ ಮಳೆಗಾಲದಲ್ಲಿ ಕಾಣಸಿಗುವ ಮಿನುಗಳು. ಮುಗುಡು ಮೀನಿನ ಮೈಮೇಲೆ ಜೆಲ್ಲಿಯಂತಹಾ ವಸ್ತುವೊಂದಿದೆ. ಇದಿರುವುದರಿಂದಲೇ ಈ ಮೀನನ್ನು ಹಿಡಿದರೆ ನಮಗೆ ಜಾರುವ ಅನುಭವವಾಗುತ್ತದೆ. ಹೀಗಾಗಿ ಈ ಮೀನು ಸುಲಭವಾಗಿ ಇತರ ಪ್ರಾಣಿಗಳ ಬಾಯಿಗೆ ತುತ್ತಾಗುವುದಿಲ್ಲ.
ನೀರು ಆವಿಯಾಗುತ್ತಿದ್ದಂತೆ ಬುದ್ಧಿವಂತಿಕೆ ತೋರಿಸುವ ಈ ಮೀನು ಸುತ್ತಲಿರುವ ಕೆಸರನ್ನು ತನ್ನ ದೇಹದ ಸುತ್ತಾ ಮೆತ್ತಿಸಿಕೊಳ್ಳಲು ಶುರುಮಾಡುತ್ತದೆ. ಅಥವಾ ಮೀನೇ ಸ್ವತಹ ಕೆಸರಿರುವ ಜಾಗಕ್ಕೆ ತುರುಕಿಕೊಂಡು ಅಲಿಂದ ಹೊರಬರುವುದೇ ಇಲ್ಲ. ಇದರ ಮೇಲೆ ಅಂಟಿಕೊಂಡ ದಪ್ಪನೆಯ ಕೆಸರು ಕೆಲದಿನಗಳ ನಂತರ ಸೂರ್ಯನ ಪ್ರಖರ ಬಿಸಿಲ ಬೇಗೆಗೆ ಗಟ್ಟಿಯಾಗಿ ಅಂಟಿಬಿಡುತ್ತದೆ. ಆಮೇಲೆ ಈ ಮೀನು ಕೆಸರಿನ ಒಳಗಡೆ ಬಂದಿಯಾದಂತೆಯೇ.
ಕೆಸರು ಸುತ್ತಲಿರುವ ಕಾರಣ ಮಳೆಗಾಲ ಸಂಪೂರ್ಣ ನಿಂತು ಬಿಸಿಲು ಬೀಳುತ್ತಿದ್ದಂತೆ ಅದರ ಮೇಲೆ ಹತ್ತಿರುವ ಕೆಸರು ಒಣಗಿಕೊಳ್ಳತೊಡಗುತ್ತದೆ. ಒಣಗಿದ ಮೇಲೆ ಈ ಮೀನು ಸಂಪೂರ್ಣ ಬಂಧಿ. ಅಲ್ಲಿಂದ ಹೊರ ಬರಬೇಕಾದರೆ ಮತ್ತೊಂದು ಮಳೆ ಬರಬೇಕು. ಒಂದು ವೇಳೆ ಮಳೆ ಬಾರದೆ ಬರಗಾಲ ಆವರಿಸಿದರೆ ಇದು ಸತ್ತಂತೆಯೇ ಅರ್ಥ.
ಮಳೆಗಾಲದಲ್ಲಿ ಸಿಕ್ಕಾಪಟ್ಟೆ ತಿಂದು ಕೊಬ್ಬು ಶೇಖರಿಸಿಕೊಳ್ಳುವ ಈ ಮೀನುಗಳು ಮುಂದಿನ ಆರು ತಿಂಗಳು ಮಣ್ಣಿನೊಳಗಡೆ ಅದನ್ನೇ ಕರಗಿಸಿ ಬದುಕುತ್ತದೆ. ಅದಕ್ಕೆ ಕುಡಿಯಲು ನೀರು ಸಹ ಬೇಕಾಗಿರುವುದಿಲ್ಲ. ನೀರಿಲ್ಲದೆಯೇ ಬಹುತಿಂಗಳ ಕಾಲ ಬದುಕಬಲ್ಲ ಈ ಮೀನು ಪ್ರಕೃತಿಯ ನಿಜವಾದ ಅಚ್ಚರಿಯ ಪ್ರಾಣಿಗಳಲ್ಲೊಂದು.
ಮೀನು ಹೊರಬರುವುದು ಹೇಗೆ?

Ad Widget . Ad Widget .


ಮುಗುಡು ಮೀನು ಹೊರಬರಬೇಕಾದರೆ ಬಿರಿಸಿನ ಮಳೆ ಬರಲೇ ಬೇಕು. ಜೋರಾದ ಮಳೆ ಬೀಳುತ್ತಿದ್ದಂತೆ ಒಣಗಿರುವ ಕೆಸರಿಗೆ ನೀರು ಸೇರಿಕೊಳ್ಳಲಾರಂಭಿಸುತ್ತದೆ. ಹೀಗೆ ನೀರು ಬೀಳುತ್ತಾ ಬೀಳುತ್ತಾ ಕೆಸರು ನಿಧಾನವಾಗಿ ಕರಗುತ್ತದೆ. ಆಮೇಲೆ ಈ ಮೀನು ಬಂಧಮುಕ್ತ. ಆಮೇಲೆ ಈ ಮೀನು ನಿಧಾನವಾಗಿ ಮಿಸುಕಾಟ ಶುರುಮಾಡಿಕೊಳ್ಳುತ್ತದೆ. ತನ್ನ ಶರೀರದ ಮೇಲಿರುವ ಕೆಸರು ಸಂಪೂರ್ಣವಾಗಿ ಹೊರಹೋದ ಮೇಲೆ ಮೀನು ಸಂಪೂರ್ಣವಾಗಿ ಸ್ವತಂತ್ರವಾದಂತೆಯೇ ಸರಿ. ಆಮೇಲೆ ಈ ಮೀನು ಸುಮ್ಮನಿರುವುದಿಲ್ಲ. ಕೆಸರನ್ನು ತನ್ನಲ್ಲಿರುವ ಚೂಪಾ ಮುಳ್ಳುಗಳಿಂದ ಕೆಸರನ್ನು ಸರಿಸಿಕೊಂಡು ತೂತು ಮಾಡಿ ಅಲ್ಲಿಂದ ಹೊರಬರುತ್ತದೆ. ಹೊರಬರುವ ಸಂದರ್ಭ ಈ ಮೀನು ಎಷ್ಟು ಖುಷಿಯಾಗಿರುತ್ತದೆಂದರೆ ತನ್ನ ಬಾಯಿಯಿಂದ ಟರ್‌ರ್‌ರ್ ಎನ್ನು ಸದ್ದನ್ನು ನಾವು ಸೂಕ್ಷ್ಮವಾಗಿ ಕೇಳಿಸಿಕೊಳ್ಳಬಹುದು. ಸುಮಾರು ಎರಡು ಮೂರು ತಿಂಗಳು ಕೆಸರಿನಲ್ಲಿ ಬಂಧಿಯಾಗಿರುವ ಈ ಮೀನಿಗೆ ಕೆಸರಿನಿಂದ ಹೊರಬಂದ ಮೇಲೆಯೂ ನೆಮ್ಮದಿ ಇರುವುದಿಲ್ಲ.
ಉಬರ್ ಹಿಡಿಯುವವರಿಗೂ ಕೂಡಾ ಮೀನು ಜಾಸ್ತಿ ಸಿಗುವುದು ಮಳೆಗಾಲದ ಮೊದಲ ಜೋರು ಮಳೆಯಂದೇ. ಮೀನು ಹೊರಬರುತ್ತಿದ್ದಂತೆ ಹೊರಗಡೆ ಉಬರ್‌ಹಿಡಿಯುವವರು ಹೊಂಚುಹಾಕಿ ಕಾಯುತ್ತಾ ತನ್ನ ಬಲವಾದ ಕತ್ತಿಯಲ್ಲಿ ಆಹುತಿ ಮಾಡಿಬಿಡುತ್ತಾರೆ. ಒಂದು ವೇಳೆ ಕಡಿಮೆ ಮಳೆ ಬಂದರೆ ಉಬರ್ ಹಿಡಿಯುವವರಿಗೆ ಈ ಮೀನು ಸಿಗುವುದೇ ಇಲ್ಲ. ಹೆಚ್ಚಿನವರು ಈ ಸಂದರ್ಭ ಬರಿಗೈಯಲ್ಲಿ ವಾಪಸಾಗುವ ಘಟನೆಗಳೂ ಇವೆ. ಅರ್ಧ ಕೆಸರಿನಲ್ಲಿ  ಹೊರಬರಲಾರದೆ ಕೆಲವು ಮೀನುಗಳು ಅರೆಜೀವಾವಸ್ಥೆಗೆ ತಲುಪುತ್ತದೆ. ಇನ್ನು ಕೆಲವು ಇದರಲ್ಲೇ ಸಾಯಲೂ ಬಹುದು.
ನೀರು ಆವಿಯಾಗುತ್ತಿದ್ದಂತೆ ಜಾಸ್ತಿ ಕೆಸರಾಗುವ ಸಂದರ್ಭದಲ್ಲಿ ಕೆಲವರು ಈ ಮೀನನ್ನು ಬೇಟೆಯಾಡಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಮೀನುಗಳು ಸಿಗುವ ಅವಕಾಶ ಜಾಸ್ತಿ ಇರುತ್ತದೆ. ಯಾಕೆಂದರೆ ಮಳೆ ಕಡಿಮೆಯಾಗುತ್ತಿದ್ದಂತೆ ಈ ಮೀನು ಭೂಗತವಾಗುವ ಸಮಯ. ಇಲ್ಲಿ ಅಳಿದುಳಿದ ಮೀನುಗಳು ಮುಂದಿನ ವರ್ಷದಲ್ಲಿ ವಂಶಾಭಿವೃದ್ಧಿ ಮಾಡಬೇಕು. ಆ ಜಾಗದಿಂದ ಸಂಪೂರ್ಣವಾಗಿ ಈ ಮೀನನನ್ನು ಬೇಟೆಯಾಡಿದರೆ ಅದರ ವಂಶ ನಿರ್ವಂಶವಾದಂತೆಯೇ. ಆದರೂ ಕೆಲವೊಂದು ಮೀನುಗಳು ಹೇಗಾದರೂ ಬೇಟೆಯಿಂದ ತಪ್ಪಿಸಿಕೊಳ್ಳುತ್ತದೆ.
ವಿಷಯ ಹೇಗೆ ಗೊತ್ತಾಯಿತು?

This image has an empty alt attribute; its file name is ubar+(11).JPG


ಒಂದು ಸಾರಿ ನಾವು ಆವೆ ಮಣ್ಣು ತರಲು ಹೋಗಿದ್ದೆವು. ಅದ್ನು ಪಟ್ಲಾ ಎಂದು ಕರೆಯುತ್ತಾರೆ. ಇಡೀ ಊರಿನ ನೆರೆ ಬಂದು ಅಲ್ಲಿಗೆ ಬಂದು ಸೇರಿರುವುದರಿಂದ ಅದನ್ನು ಪಟ್ಲಾ ಎಂದು ಕರೆಯಲಾಗುತ್ತದೆ. ಇಡೀ ಊರಿನ ಮರದ ಎಲೆಗಳು ಇನ್ನಿತರ ವಸ್ತುಗಳು ಕೊಚ್ಚಿಕೊಂಡು ಬಂದು ಪಟ್ಲಾದಲ್ಲಿ ಜಮೆಯಾಗುತ್ತದೆ. ಅದು ಅಲ್ಲಿನ ಮಣ್ಣಿನೊಂದಿಗೆ ಸಂಯೋಗಗೊಂಡು ಆವೆ ಮಣ್ಣು ತಯಾರಾಗುತ್ತದೆ.
ನಮ್ಮದು ಐದು ಜನರ ತಂಡ. ಆವೆಮಣ್ಣು ಇರುವ ಜಾಗವನ್ನು ಹುಡುಕಿ ಕೊನೆಗೆ ಒಂದು ಸ್ಥಳವನ್ನು ಆಯ್ಕೆ ಮಾಡಿದೆವು. ಮೊದಲೇ ಒಣಗಿದ ಜಾಗ. ಮಣ್ಣು ಒಣಗಿ ಹೋಗಿತ್ತು. ಸಾಧಾರಣವಾಗಿ ನಮ್ಮ ಹಾರೆ ಪಿಕಾಸುಗಳೂ ಸಹ ಮಣ್ಣಿಗೆ ತಾಗುತ್ತಿರಲಿಲ್ಲ. ಆದ್ದರಿಂದ ಬಹಳ ತ್ರಾಸದಿಂದ ಮಣ್ಣನ್ನು ಕೊರೆಯಬೇಕಾಯಿತು.
ನಮ್ಮಲ್ಲಿ ಶಂಕರ ಎಂಬ ಉತ್ಸಾಹಿ ಇದ್ದಾನೆ. ಆತನಿಗೆ ಈ ಪ್ರಕೃತಿ ಅದು ಇದೂ ಅಂದರೆ ಬಹಳ ಇಷ್ಟ. ಪ್ರಕೃತಿಯಲ್ಲಿ ಏನಾದರೂ ವೈಚಿತ್ರ್ಯಗಳು ಸಂಭವಿಸಿದರೆ ಮೊದಲು ಕಣ್ಣಿಗೆ ಬೀಳುವುದು ಈತನ ಮೇಲೆ.
ಆತ ಹಾರೆಯಿಂದ ಮಣ್ಣು ತೆಗೆಯುತ್ತಿದ್ದಂತೆ ಒಂದು ಭಾಗದಲ್ಲಿ ರಕ್ತ ಒಸರಲಾರಂಭಿಸಿತು.
ಯಾವುದೋ ಕೇರೆಯನ್ನು ತನ್ನ ಕತ್ತರಿಸಿ ಹಾಕಿದನೆಂದು ನಾವು ಗೊಂದಲದಿಂದ ಹೋದರೆ ಆತ ಕೆಸರು ಮೆತ್ತಿಕೊಂಡ ಮುಗುಡು ಮೀನನ್ನು ಕತ್ತರಿಸಿ ಹಾಕಿದ್ದ. ನಾವು ಇದೇ ರೀತಿ ಮಣ್ಣು ಅಗೆಯುತ್ತಿದ್ದಂತೆ ಹಲವಾರು ಮೀನುಗಳು ನಮ್ಮ ಹಾರೆಗೆ ಆಹುತಿಯಾದವು.
ತನ್ನ ಜೀವ ತುಂಡಾದರೂ ಸಹ ಈ ಮೀನುಗಳದ್ದು ಸುಲಭವಾಗಿ ಜೀವ ಹೋಗುವುದಿಲ್ಲ. ಆದರೆ ಮೊದಲೇ ಬೇಸಿಗೆಕಾಲ ಆದ್ದರಿಂದ ಈ ಸಂದರ್ಭದಲ್ಲಿ ಈ ಮೀನು ಜೀವಚ್ಛವದಂತೆ ಕಂಡುಬಂದಿತು. ಆದ್ದರಿಂದ ನಮಗೆ ಅಲ್ಲಿ ಚುರುಕುತನ ಕಂಡುಬರಲಿಲ್ಲ. ಆದರೂ ದೇಹ ಎರಡು ತುಂಡಾದರೂ ಅದರ ಪ್ರಾಣ ಸುಲಭವಾಗಿ ಹೋಗುವುದಿಲ್ಲ. ಆದರೆ ಮಳೆಗಾಲದಲ್ಲಿ ಸಿಗುವ ಜೀವಂತ ಮೀನುಗಳನ್ನು ಎಷ್ಟು ತುಂಡು ಮಾಡಿದರೂ ಜೀವವಿದ್ದು ಮಿಸುಕಾಟ ಮಾಡಿಕೊಳ್ಳುತ್ತಿರುತ್ತದೆ. ಮೀನು ಬೇಯುವಾಗಲೂ ಸಹ ಕ್ಷಣಹೊತ್ತು ಒದ್ದಾಟ ನಡೆಸಿ ಕೊನೆಗೆ ಪ್ರಾಣ ಕಳೆದುಕೊಳ್ಳುತ್ತದೆ.

 ಬರಹ : ಗಿರೀಶ್ ಮಳಲಿ

(ಮಾಹಿತಿ: ಉಬರ್ ಅಂದರೆ ಮಳೆಗಾಲದ ಆರಂಭದಲ್ಲಿ ಹೊಳೆ ತೋಡುಗಳಲ್ಲಿ ನಡೆಯುವ ಮೀನಿನ ಭೇಟೆ. ಸಾಮಾನ್ಯವಾಗಿ ಇದು ರಾತ್ರಿ ವೇಳೆ ನಡೆಯುತ್ತದೆ)

Leave a Comment

Your email address will not be published. Required fields are marked *