ಹಾಸನ ಜಿಲ್ಲೆ ಶಿಲ್ಪಕಲೆಗಳ ತವರೂರು. ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹೀಗೆ ಹತ್ತು ಹಲವು ಪಾರಂಪರಿಕ ತಾಣಗಳನ್ನು ತನ್ನೊಡಲಲ್ಲಿ ಹೊತ್ತುಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಾಸನ ಪರಂಪರಾಗತ ಕೃಷಿ, ರಾಜಕೀಯ ವಿದ್ಯಮಾನ, ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ಪ್ರಸಿದ್ದವಾಗಿದೆ. ವರ್ಷಕ್ಕೊಮ್ಮೆ ಭಕ್ತಾದಿಗಳ ದರುಶನಕ್ಕೆ ತೆರೆಯುವ ಹಾಸನಾಂಬ ದೇಗುಲವು ಹಾಸನದ ಮತ್ತೊಂದು ವಿಶೇಷ. ಇವೆಲ್ಲದರ ನಡುವೆ ಹೇಮಾವತಿ ನದಿಯ ಹಿನ್ನೀರಿನಲ್ಲಿ ನಿಂತಿರುವ ಶೆಟ್ಟಿಹಳ್ಳಿ ಚರ್ಚ್ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು.
ಮುಳುಗದ ಟೈಟಾನಿಕ್ ಹಡಗು ಎಂದೇ ಹೆಸರು ಪಡೆದಿರುವ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್‌ನ್ನು ಕಣ್ಣು ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಇತ್ತ ಕಡೆ ಹರಿದು ಬಂದು ಇಲ್ಲಿನ ಸೌಂದರ‍್ಯ ಸವಿಯುತ್ತಾರೆ.
ಹಾಸನ ಜಿಲ್ಲೆಯಲ್ಲಿರುವ ಪುರಾತನ ಚರ್ಚ್ಗಗಳಲ್ಲಿ ಶೆಟ್ಟಿಹಳ್ಳಿ ಚರ್ಚ್ ಪ್ರಸಿದ್ದವಾದುದು. ಇದರ ವಿಶೇಷತೆ ಎಂದರೆ ಪ್ರತೀ ವರ್ಷವು ಉತ್ತಮ ಮಳೆಯಾಗುತ್ತಿದಂತೆ ಹೇಮಾವತಿ ಅಣೆಕಟ್ಟೆ ತುಂಬಿ ಹಿನ್ನೀರಿನಲ್ಲಿದ್ದ ಚರ್ಚ್ ಶೇ.90 ರಷ್ಟು ಮುಳುಗಿ ಉಳಿದ ಭಾಗ ಹಡಗಿನಿಂತೆ ತೇಲುವಂತೆ ಕಾಣುತ್ತದೆ. ಇದೊಂದು ಸುಂದರ ಆಕರ್ಷಣೀಯ ತಾಣವಾದ್ದರಿಂದ ಬೇರೆ ಬೇರೆ ಊರು, ಹೊರ ಜಿಲ್ಲೆ, ಹೊರ ರಾಜ್ಯದಿಂದ ಅನೇಕ ಪ್ರವಾಸಿಗರು ಇಲ್ಲಿಗೆ ಪ್ರವಾಸ ಬರುತ್ತಾರೆ. ನದಿ ತುಂಬಿರುವ ಸಮಯದಲ್ಲಿ ಪ್ರವಾಸಿಗರು ಹಿನ್ನೀರಿನಲ್ಲಿ ಮಿಂದು ಸಂತಸಪಡುತ್ತಾರೆ. ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಆಲೂರು, ಬೇಲೂರು ಮುಂತಾದ ಕಡೆಗಳಲ್ಲಿ ನೆಲೆಸಿದ್ದ ಶ್ರೀಮಂತ ಬ್ರಿಟಿಷರಿಗಾಗಿ 1860ರಲ್ಲಿ ಫ್ರೆಂಚ್ ಪಾದ್ರಿಗಳು ಈ ಚರ್ಚ್ ನಿರ್ಮಿಸಿದ್ದಾರೆ ಎನ್ನುತ್ತದೆ ಇತಿಹಾಸ. ಸುಣ್ಣ-ಮರಳಿನ ಗಾರೆ ಮೂಲಕ ಗೋಥಿಕ್ ವಾಸ್ತುಶಿಲ್ಪದ ಮಾದರಿಯಲ್ಲಿ ಈ ಚರ್ಚ್ ಅನ್ನು ನಿರ್ಮಿಸಲಾಗಿದೆ.
ಅನೇಕರಿಗೆ ಇದು ಫೋಟೋ ಶೂಟ್‌ಗೆಂದೇ ಹೇಳಿಮಾಡಿಸಿದ ಸ್ಥಳವಾಗಿದೆ. ಇಲ್ಲಿ ಈಗಾಗಲೇ ಹಲವು ಸಿನಿಮಾಗಳು ಚಿತ್ರೀಕರಣಗೊಂಡಿದ್ದು, ಇತ್ತೀಚೆಗೆ ಪ್ರೀವೆಡ್ಡಿಂಗ್ ಫೋಟೋ ಶೂಟ್ ಚಿತ್ರೀಕರಣಕ್ಕಾಗಿ ಯುವಕ, ಯುವತಿಯರು ಲಗ್ಗೆ ಇಡುತ್ತಿದ್ದಾರೆ. ಮುಂಜಾನೆ ಸೂರ್ಯ ಉದಯಿಸುವ ಮುನ್ನವೇ ಸ್ಥಳದಲ್ಲಿ ಹಾಜರಿದ್ದು, ಮುಂಜಾನೆಯ ಕಿರಣಗಳು ಚರ್ಚ್ ಮೇಲೆ ಬೀಳುವ ವೇಳೆಗೆ ಚಿತ್ರೀಕರಣ ನಡೆಸಿಕೊಳ್ಳುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ಪ್ರೇಮಿಗಳಿಗೆ ತಮ್ಮ ಸುಂದರ ಸಮಯವನ್ನು ಶೆಟ್ಟಿಹಳ್ಳಿ ಚರ್ಚ್ ಒಂದು ಸುಂದರ ತಾಣ.
ಹೀಗೆ ಬನ್ನಿ:
ಶೆಟ್ಟಿಹಳ್ಳಿ ಹಾಸನ ನಗರದಿಂದ ಗೊರೂರು ಮಾರ್ಗವಗಿ 22 ಕಿ.ಮೀ ಸಂಚಾರಿಸ ಬೇಕಾಗುತ್ತದೆ. ಶೆಟ್ಟಿ ಹಳ್ಳಿ ನಗರದಿಂದ 2 ಕಿ. ಮೀ ಕ್ರಮಿಸಿದರೆ ಇಲ್ಲಿಗೆ ತಲುಪಬಹುದಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಹೇಮಾವತಿ ಜಲಾಶಯವನ್ನು ಕೂಡ ನೋಡಬಹುದು. ನೀವೂ ಒಮ್ಮೆ ಇಲ್ಲಿಗೆ ಯಾಕೆ ಭೇಟಿ ನೀಡಬಾರದು?
ಫೋಟೋಗ್ರಾಫಿ: ದೀಕ್ಷಿತ್ ಮಲ್ಲಾರ , ಟೀಂ ರೂರಲ್ ಟೂರಿಸ್ಟರ್