ಪಡುವಣ ಕಡಲಿನ ತೀರದಲ್ಲಿ ಹತ್ತಾರು ಸುಂದರ ಬೀಚ್‌ಗಳಿವೆ. ಕೇರಳದ ಕಾಸರಗೋಡಿನಿಂದ ಗೋವಾದವರೆಗೆ ಅರಬ್ಬಿ ಸಮುದ್ರದ ತೀರದಲ್ಲಿ ಹಲವು ಸುಂದರ ತಾಣಗಳು ಮೈಚಾಚಿ ಮಲಗಿವೆ. ಇಂಥ ಬೀಚ್‌ಗಳ ಪೈಕಿ ಉಡುಪಿ ಜಿಲ್ಲೆಯಲ್ಲಿರುವ ಕಾಪು ಕೂಡಾ ಒಂದು.
ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಧ್ಯೆ ಸಿಗುವ ಕಾಪು ಪೇಟೆಯಿಂದ ಪಶ್ಚಿಮಕ್ಕೆ ನಡೆದು ಹೋದರೆ ವಿಶಾಲ ಸಮುದ್ರ ಕಾಣಸಿಗುತ್ತದೆ. ಅದೇ ನೀವು ನೋಡಬಹುದಾದ ಕಾಪು ಬೀಚ್ ಮತ್ತು ದೀಪಸ್ತಂಭ(ಲೈಟ್ ಹೌಸ್). ಮಂಗಳೂರಿನಿಂದ ಸುಮಾರು 45 ಕಿ.ಮೀ ಹಾಗೇ ಉಡುಪಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಈ ಬೀಚ್ ನಲ್ಲಿ
ನಿಂತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮ. ಸಮುದ್ರ ತೀರದ ಸಮೀಪದಲ್ಲಿ ಜೈನ ಬಸದಿಗಳ ಅವಶೇಷಗಳು ಕೂಡಾ ಇವೆ. ಕಾಪು ಬೀಚ್‌ನ ಸಮೀಪ ಇರುವ ಇನ್ನೊಂದು ಆಕರ್ಷಣೆಯೆಂದರೆ, ಹಳೆಯದಾದ ಒಂದು ಕೋಟೆ ಮತ್ತು ಮಾರಿಯಮ್ಮ ದೇವಿಯ ಎರಡು ದೇವಸ್ಥಾನಗಳು. ವರ್ಷವಿಡೀ ಈ ದೇವಸ್ಥಾನ ತೆರೆದಿರುತ್ತದೆ.
ಕಡಿಮೆ ಜನಸಂದಣಿಯನ್ನು ಹೊಂದಿರುವುದರಿಂದ ಕಾಪು ಕಡಲತೀರ ಹೆಚ್ಚು ಜನಪ್ರಿಯವಾಗಿದೆ. ದೀಪ ಸ್ಥಂಭದ ಬಳಿ ಇರುವ ಬಂಡೆಗಳು ಪ್ರಮುಖ ಆಕರ್ಷಣೆಯಾಗಿವೆ. ಕಡಲತೀರದ ಹತ್ತಿರ ವಾಹನ ನಿಲ್ದಾಣ, ತೆಂಗಿನ ತೋಟ ಮತ್ತು ಲಘು ಉಪಾಹಾರ ಗೃಹಗಳಿವೆ.
ಕಾಪು ದೀಪ ಸ್ಥಂಭವನ್ನು 1901 ರಲ್ಲಿ ನಿರ್ಮಿಸಲಾಯಿತು. ಕಾಪು ದೀಪ ಸ್ಥಂಭ 27 ಮೀಟರ್ ಎತ್ತರವಿದೆ. ಬಂಡೆಯ ಮೇಲೆ ನಿರ್ಮಿಸಲಾಗಿರುವ ಈ ದೀಪ ಸ್ಥಂಭ ಶತಮಾನ ಕಳೆದರೂ ಸುಭದ್ರವಾಗಿ ನಿಂತಿದೆ. ಹಿಂದಿನ ಕಾಲದಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನ ಮತ್ತು ಮಾರ್ಗದರ್ಶಕ ಇರಲಿಲ್ಲವಾದ್ದರಿಂದ ತೀರದಲ್ಲಿರುವ ದೀಪ ಸ್ಥಂಭಗಳು ಹಡಗಿನ ನಾವಿಕರಿಗೆ ದಾರಿ ದೀಪವಾಗಿದ್ದವು.
ಇದು ಪ್ರತಿದಿನ ಸಂಜೆ 4 ರಿಂದ ಸಂಜೆ 6ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ. ಸಂದರ್ಶಕರು ಮೆಟ್ಟಿಲುಗಳ ಮೇಲೆ ಹೋಗಿ ಕಾಪು ಕಡಲತೀರದ ಸುಂದರ ನೋಟವನ್ನು ಕಣ್ತುಂಬಿಕೊಳ್ಳಬಹುದು. ಸುರಕ್ಷತಾ ಕಾರಣಗಳಿಗಾಗಿ ಭಾರೀ ಮಳೆಯ ಸಮಯದಲ್ಲಿ ದೀಪಸ್ತಂಭವನ್ನು ಸಾರ್ವಜನಿಕರ ವೀಕ್ಷಣೆಗೆ ನಿಷೇಧಿಸಲಾಗುತ್ತದೆ.
ಕಾಪು ಬೀಚ್‌ಗೆ ಬರುವ ಪ್ರವಾಸಿಗರು ಮಲ್ಪೆ (20 ಕಿ.ಮೀ), ಉಡುಪಿ (15 ಕಿ.ಮೀ), ಮಂಗಳೂರು (45 ಕಿ.ಮೀ), ಸಸಿಹಿತ್ಲು ಬೀಚ್ (30ಕಿ.ಮೀ) ಕಾಪು ಜೊತೆಗೆ ಭೇಟಿ ನೀಡಬಹುದು.
ಪ್ರವಾಸಿಗರು ತಲುಪುವ ಬಗ್ಗೆ ಬೆಂಗಳೂರಿನಿಂದ 400 ಕಿ.ಮೀ ಮತ್ತು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 45 ಕಿ.ಮೀ ದೂರದಲ್ಲಿದೆ. ಉಡುಪಿ ಹತ್ತಿರದ ರೈಲು ನಿಲ್ದಾಣ (15 ಕಿ.ಮೀ). ಕಾಪು ತಲುಪಲು ಮಂಗಳೂರು ಮತ್ತು ಉಡುಪಿಯಿಂದ ನಿಯಮಿತ ಬಸ್ಸುಗಳು ಲಭ್ಯವಿದೆ.