ನೀರು ಮಾನವ ಕುಲದ ಅಸ್ತಿತ್ವ ಹಾಗೂ ಪುನಶ್ಚೇತನಕ್ಕೆ ಜೀವನಾಧಾರ ದ್ರವವಾಗಿದ್ದು, ಜೀವಜಲ ಎಂದೇ ಭಾವಿಸಲಾಗಿದೆ. ಮನುಷ್ಯನಿಗೆ ಗಾಳಿಯಂತೆಯೇ ನೀರು ಅತಿ ಅಮೂಲ್ಯ. ಹಾಗಾಗಿ ನೀರಿನ ಬಳಕೆ ,ಉಳಿಕೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಾರಂಭವಾದದ್ದು 1993ರಿಂದ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಸುಧೀರ್ಘ ಚರ್ಚೆಯ ನಂತರ ತೀರ್ಮಾನ ಕೈಕೊಂಡು ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

ಹಾನಿಗೊಳಗಾದ ಪರಿಸರ ವ್ಯವಸ್ಥೆಯು ಮಾನವ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಪ್ರಕೃತಿಯನ್ನು ಉಳಿಸಿ ನೀರನ್ನು ಸಂರಕ್ಷಿಸಬೇಕಾಗಿದೆ. ಏಕೆಂದರೆ ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಜಲವೇ ಸಂಜೀವಿನಿ. ನಮ್ಮ ಭಾರತದಲ್ಲಿ ನೀರಿಗೆ ದೈವೀ ಸ್ಥಾನವನ್ನು ನೀಡಲಾಗಿದೆ. ಸಂಶೋಧನೆ ಪ್ರಕಾರ ಭೂಮಿ ಮಾತ್ರ ಮಾನವ ಯೋಗ್ಯ ತಾಣ ಮತ್ತು ಶುದ್ಧ ಸಿಹಿ ನೀರು ಸಿಗುವ ಏಕೈಕ ಗ್ರಹ. ಭೂಮಿಯಲ್ಲಿ ಉಪಯೋಗಿಸಬಹುದಾದ ಸಿಹಿ ನೀರಿನ ಅಂಶ ಬಹಳ ಕಡಿಮೆ ಇದೆ. ಇಂದು, 2.1 ಶತಕೋಟಿ ಜನರ ಮನೆಯಲ್ಲಿ ಕುಡಿಯುವ ಶುದ್ಧ ನೀರು ಸಿಗದೇ ಬದುಕುತ್ತಿದ್ದಾರೆ. ಇದು ಅವರ ಆರೋಗ್ಯ, ಶಿಕ್ಷ ಣ ಮತ್ತು ಜೀವನೋಪಾಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಬೆಳೆಯುತ್ತಿರುವ ಜನಸಂಖ್ಯೆ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ, ಕೈಗಾರೀಕರಣ, ಅರಣ್ಯನಾಶ ಇನ್ನಿತರ ಕಾರಣಗಳಿಂದ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ನೀರಿದ್ದರೆ ಮಾತ್ರವೇ ನಮ್ಮೆಲ್ಲರ ಉಳಿವು. ನೀರಿಲ್ಲವಾದರೆ ನಮ್ಮೆಲ್ಲರ ಶಾಶ್ವತ ಅಳಿವು ಶತಸಿದ್ಧ ಎಂಬುದನ್ನು ಎಲ್ಲರೂ ನೆನಪಿಡಬೇಕು. ಇತ್ತೀಚೆಗೆ ಬೇಸಿಗೆ ಶುರುವಾಗುವ ಮೊದಲೇ ನೀರಿನ ಕೊರತೆ ಕಂಡುಬರುತ್ತಿದೆ. ನಮ್ಮ ಭಾರತದಲ್ಲಿ ಎಷ್ಟೋ ಗ್ರಾಮಗಳಲ್ಲಿ ಇಂದಿಗೂ ನೀರಿನ ಕೊರತೆಯ ತೀವ್ರ ಸಮಸ್ಯೆ ಇದೆ. ನೀರನ್ನು ಅನವಶ್ಯಕವಾಗಿ ಪೋಲುಮಾಡದೆ ಹನಿ ಹನಿ ನೀರನ್ನು ಸಂರಕ್ಷಿಸುವುದು ಉತ್ತಮ.

ಅದರಲ್ಲೂ ಮುಖ್ಯವಾಗಿ ಜಲಸಂಪತ್ತನ್ನು ಸುಸ್ಥಿರವಾಗಿ ಬಳಸಲೇ ಬೇಕಾದ ಅಗತ್ಯವಿದೆ. ಏಕೆಂದರೆ ಅದನ್ನು ಕೃತಕವಾಗಿ ಸೃಷ್ಟಿಸಲಾಗದು. ಈ ಘೋಷವಾಕ್ಯ ಹಿನ್ನೆಲೆಯ ವಿಶ್ವ ಜಲ ದಿನ ಕೇವಲ ಮಾರ್ಚ್ 22ಕ್ಕೆ ಸೀಮಿತವಾಗದಿರಲಿ. ನಮ್ಮ ನಿತ್ಯ ಜೀವನದಲ್ಲಿ ಅನುಷಂಗಿಕವಾಗಿ ಬೆರೆತುಹೋಗಲಿ. ಆಗಲೇ ಸುಸ್ಥಿರ ನಡೆ ಸಾಧ್ಯ. ಪ್ರತಿ ದಿನವೂ ಜಲ ದಿನವಾಗಿರಲಿ. ಯಾಕೆಂದರೆ ಜಲದ ಅಳಿವು ಜಗದ ಅಳಿವಾಗಬಹುದು.