ದಕ್ಷಿಣ ಕನ್ನಡದ ಸುಳ್ಯದಿಂದ ಮಡಿಕೇರಿ ಮಾರ್ಗದಲ್ಲಿ “ಅರಂತೋಡು”ಎಂಬಲ್ಲಿ ಬಲಕ್ಕೆ ತಿರುಗಿ ಆರೇಳು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಹಸಿರು ಪ್ರಕೃತಿಯ ಸುಂದರ ತಾಣವೇ ತೊಡಿಕಾನ. ಜುಳು ಜುಳು ಹರಿಯುವ ತೊರೆಯ ತಟದಲ್ಲಿ ಕಂಗೊಳಿಸುವುದೇ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಾಲಯ. ಇದು 3000 ವರ್ಷಗಳಷ್ಟು ಹಳೆಯ ದೇವಸ್ಥಾನವೆಂದು ಸಾಮಾನ್ಯವಾಗಿ ಹೇಳಿದರೂ ಮಹಾಭಾರತ ಕಾಲದಲ್ಲಿ ಇತ್ತೆಂಬುದಕ್ಕೆ ಇತಿಹಾಸಕಾರರು ದಾಖಲೆ ಕೊಡುವ ಕಾರಣ 5000 ವರ್ಷದ ಮೇಲ್ಪಟ್ಟದ್ದೆಂದು ಹೇಳಲಾಗುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ “ತುದಿ” ಯ ಕಾನನ(ಕಾಡು) ಆದ ಕಾರಣ” ತುದಿಕಾನ” ಎಂದು ಕಾಲಾನುಕ್ರಮದಲ್ಲಿ”ತೊಡಿಕಾನ”ಎಂದು ಪ್ರಸಿದ್ಧವಾಯಿತು. ಸದ್ಯ ದೇವಾಲಯ ಇರುವ ಸ್ಥಳ ಮಹಾ ತಪಸ್ವಿಗಳಾದ ಕಣ್ವಮುನಿಗಳ ಆಶ್ರಮವಾಗಿತ್ತು ಎಂಬುದು ಪುರಾಣ ಸತ್ಯ.
ದ್ವಾಪರಯುಗದಲ್ಲಿ ಅರ್ಜುನನು ಪಾಶುಪತಾಸ್ತ್ರಕ್ಕಾಗಿ ತಪಸ್ಸಾಚರಿಸಿದ ಜಾಗವೇ ಇಲ್ಲಿಂದ 2 ಕಿ.ಮೀ ದೂರವಿರುವ” ದೇವರಗುಂಡಿ” ಜಲಪಾತವೆಂದು ದೇವಸ್ಥಾನದ ಸ್ಥಳಪುರಾಣ ತಿಳಿಸುತ್ತದೆ. ಕಿರಾತಾರ್ಜುನ ಯುದ್ಧ ನಡೆದು ಅರ್ಜುನನಿಗೆ ಶಿವ ಪಾರ್ವತಿಯರು ಪ್ರತ್ಯಕ್ಷರಾಗಿ ನಂತರ ಲಿಂಗ ರೂಪದಲ್ಲಿ ಐಕ್ಯರಾಗುತ್ತಾರೆ. ಯುದ್ಧದ ಸಮಯದಲ್ಲಿ ಅರ್ಜುನನ ಗಾಂಡೀವದಿಂದ ಶಿವನ ಹಣೆಗೆ ತಾಗಿದ ಪೆಟ್ಟು ಈಗ ಲಿಂಗದಲ್ಲಿ ಕಾಣುವುದರಿಂದ ಇತಿಹಾಸಕ್ಕೆ ಹೆಚ್ಚಿನ ಪುಷ್ಟಿ ನೀಡುತ್ತದೆ. ಕಾಲಾನಂತರದಲ್ಲಿ ಆ ಲಿಂಗ ಭೂಮಿಯೊಳಗೆ ಸೇರಿಹೋಗುತ್ತದೆ. ಭೂಸಮಾಧಿಯಾದ ಲಿಂಗವು ಹಲವು ವರ್ಷಗಳ ನಂತರ ” ಮಲ್ಲಿ” ಎಂಬ ಗಿರಿಜನ ಹೆಣ್ಣುಮಗಳ ಹುಲ್ಲು ಕಡಿಯುವ ಕುಡುಗೋಲಿಗೆ ಲಿಂಗವು ತಾಗಿ ರಕ್ತಸೂಸಿದಾಗ ಗಾಬರಿಯಾಗುತ್ತಾಳೆ. ಸ್ವಲ್ಪ ದೂರದಲ್ಲಿ ಆಶ್ರಮದಲ್ಲಿದ್ದ ಕಣ್ವರಿಗೆ ತಿಳಿದು ಅವರು ಬಂದು ಸ್ಪರ್ಶಿಸಿದಾಗ ತ್ರಿಕಾಲ ಜ್ಞಾನಿಗಳಾದ ಅವರಿಗೆ ಲಿಂಗದ ಹಿನ್ನೆಲೆ ತಿಳಿಯುತ್ತದೆ. ರಕ್ತಬಂದ ಜಾಗಕ್ಕೆ ಗಂಧ ತಳೆದು ಹಚ್ಚಿದಾಗ ರಕ್ತ ನಿಲ್ಲುತ್ತದೆ. ಮಲ್ಲಿಯ ಕುಡುಗೋಲಿನ ಗಾಯದ ಕುರುಹು ಈಗಲೂ ಇರುವುದರಿಂದ ಲಿಂಗಕ್ಕೆ ಪ್ರತೀದಿನ ಒಂದು ಉಂಡೆ ಶ್ರೀಗಂಧ ತಳೆದು ಇಡುವ ಸಂಪ್ರದಾಯವಿದೆ. ನಂತರ ಅವರು ಪರಮೇಶ್ವರನನ್ನು ಧ್ಯಾನಿಸಿ ಪ್ರತ್ಯಕ್ಷೀಕರಿಸಿದ ಕಣ್ವರು ಆ ಲಿಂಗವನ್ನು ತನ್ನ ಆಶ್ರಮದ ಜಾಗದಲ್ಲಿ ಪ್ರತಿಷ್ಠೆ ಮಾಡುವ ಇಂಗಿತ ವ್ಯಕ್ತಪಡಿಸುತ್ತಾರೆ. ಆಗ ಪರಮೇಶ್ವರನು ಪಂಥವೊಂದನ್ನು ಸಂಕಲ್ಪಿಸಿ, “ನಿಮ್ಮ ಸಂಕಲ್ಪದ ಜಾಗಕ್ಕೆ ಮೊದಲು ನೀವು ತಲುಪಿದರೆ ನೀವು ಗೆಲ್ಲುತ್ತೀರಿ ಆಗ ನಿಮ್ಮ ಸಂಕಲ್ಪ ಈಡೇರಿಸುತ್ತೇನೆ. ನಾನು ಮೊದಲು ತಲುಪಿದರೆ ನೀವು ಸೋಲುತ್ತೀರಿ ಆಗ ನಿಮ್ಮ ಸಂಕಲ್ಪ ಸಾಧ್ಯವಿಲ್ಲ. ಎನ್ನುತ್ತಾನೆ. ನಂತರ ಕಣ್ವರು ಲಿಂಗವನ್ನೆತ್ತಿಕೊಂಡು ಭೂ ಮಾರ್ಗದಲ್ಲಿ ನಡೆದರೆ ಶ್ರೀ ವಿಷ್ಣುವೇ ಮೀನಾಗಿ ಮತ್ಸ್ಯವಾಹನನಾದ ಶಿವನು ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ಸಾಗಿದನು. ಆ ಜಾಗಕ್ಕೆ ಕಣ್ವರೇ ಮೊದಲು ತಲುಪಲು ಭಕ್ತ ಪ್ರಿಯ ಪರಮೇಶ್ವರನು ಸೋತು ಪ್ರತಿಷ್ಠಾಪಿಸಲು ಸಮ್ಮತಿಸಿದನು. ಕಣ್ವ ಮಹರ್ಷಿಗಳು ಲಿಂಗವನ್ನು ಪ್ರತಿಷ್ಠೆ ಮಾಡಿ ‘ ”ಅರ್ಜುನನಿಂದ ಮಲ್ಲಿಗೆ ದೊರೆತ ಕಾರಣ ” ಮಲ್ಲಿಕಾರ್ಜುನ ” ಎಂಬ ಹೆಸರನ್ನು ನೀಡಿದರು ..ಹೀಗೆ ದೇವಾಲಯ ಸ್ಥಾಪಿಸಲ್ಪಟ್ಟಿತು.
ಮಲ್ಲಿಕಾರ್ಜುನ ಸ್ವಾಮಿ
ಸುಳ್ಯ ಸೀಮೆಯ ದೇವಾಲಯವಾಗಿ ತನ್ನ ಕಾರಣಿಕದಿಂದ ಭಕ್ತರ ಮನೋಭೀಷ್ಟೆ ಯನ್ನು ಈಡೇರಿಸುತ್ತಾ ಭಕ್ತರ ಮನಮಂದಿರದಲ್ಲಿ ನೆಲೆಸಿರುವ ಶ್ರೀ ಮಲ್ಲಿಕಾರ್ಜುನ ದೇವರು ಇಂದಿಗೂ ತನ್ನ ಮಹಿಮೆಯನ್ನು ತೋರುತ್ತಿದ್ದಾನೆ.
ದೇಗುಲದ ವಿಶೇಷತೆಗಳು ಅನೇಕ. ಕಣ್ವಮಹರ್ಷಿಗಳಿಂದ ರಚಿತವಾದ ಅಕ್ಷಯಾಗ್ನಿಯಿಂದ ಕೂಡಿದ ಯಜ್ಞೇಶ್ವರ. ಇದರ ಭಸ್ಮಕ್ಕೆ ವಿಶೇಷ ಶಕ್ತಿ ಇದೆ. ಅದರ ಪಕ್ಕದಲ್ಲೆ ಬ್ರಹ್ಮನ ಗುಡಿ. ಮಹಾವಿಷ್ಣುವಿನ ಗುಡಿಯೂ ಇಲ್ಲಿದೆ.ಬ್ರಹ್ಮ ವಿಷ್ಣು ಶಿವ ಇರುವಅತ್ಯಂತ ವಿರಳ ಕ್ಷೇತ್ರಗಳಲ್ಲಿ ತೊಡಿಕಾನವೂ ಒಂದು . ಲಿಂಗರೂಪಿಯಾದ ವಿಘ್ನ ವಿನಾಶಕ ಗಣಪತಿ, ಉಮಾಮಹೇಶ್ವರ ಮತ್ತು ವನಶಾಸ್ತಾರ ಜೊತೆಗೆ ವಾರಾಹೀ ಪಂಚಲಿಂಗ, ಭಕ್ತರ ಕಷ್ಟವನ್ನು ಪರಿಹರಿಸುವ ರಕ್ಷಕಿ ಪಾಷಾಣ ಮೂರ್ತಿ, ಸತ್ಯಪಾಲ ಮತ್ತು ವಾರಣಾಸಿ ಗುಂಡಿ , ಮತ್ಸ್ಯತೀರ್ಥ ಮತ್ತು ಮತ್ಸ್ಯವಾಹನನಾಗಿ ಶಿವ ಬಂದ ಕಾರಣ ದೇವರ ಮೀನುಗಳು ಇಲ್ಲಿವೆ. ಚರ್ಮರೋಗಕ್ಕೆ ಮೀನಿಗೆ ಅಕ್ಕಿ ಹಾಕುವುದಾಗಿ ಸಂಕಲ್ಪಿಸಿದರೆ ಪರಿಹಾರವಾಗುತ್ತದೆ.
ಮತ್ಸ್ಯ ತಟಾಕ
ದೇವರಗುಂಡಿ ಜಲಪಾತವು ಮೈಲುದೂರದಲ್ಲಿದ್ದು ಇಲ್ಲಿಂದ ಪರ್ವದಿವಸಗಳಲ್ಲಿ ಅರ್ಚಕರು ಹೋಗಿ ತೀರ್ಥ ತರುವ ಸಂಪ್ರದಾಯವಿದೆ. ರಾಜರ ಆಳ್ವಿಕೆಯ ನಂತರ ಬಲ್ಲಾಳರಿಗೆ ಬಂದ ನಂತರ ಉಳುವಾರು ಕುಟುಂಬಸ್ಥರ ಆಡಳಿತದಲ್ಲಿದ್ದ ದೇವಸ್ಥಾನ ನಂತರ ಈಗ ಮುಜರಾಯಿ ಇಲಾಖೆಗೆ ಸೇರಿದ “ಎ” ದರ್ಜೆಯ ದೇವಸ್ಥಾನವಾಗಿದೆ.ಪುತ್ರಸಂತಾನಕ್ಕೆ ತುಲಾಭಾರ ಹಾಗೂ ಬೇರೆ ಬೇರೆಯ ವಿಷಯಗಳಿಗೆ ವಿಶೇಷ ಸೇವೆಗಳಿವೆ. ನಿತ್ಯತ್ರಿಕಾಲಗಳಲ್ಲಿ ಪೂಜೆ ನಡೆಯುತ್ತಾ ಬರುತ್ತಿದೆ. ನಿತ್ಯ ಮಧ್ಯಾಹ್ನ ಭಕ್ತರಿಗೆ ಅನ್ನದಾನ ನಡೆಯುತ್ತದೆ. ಸೋಮವಾರ ಪೂಜೆ ಇಲ್ಲಿ ಭಗವಂತನಿಗೆ ಅತಿ ಪ್ರಿಯವಾದುದು.
ದೇಗುಲದ ಪ್ರಧಾನ ದ್ವಾರ
ತಾಲೂಕು ಕೇಂದ್ರ ಸುಳ್ಯದಿಂದ ಖಾಸಗಿ ಬಸ್ಸುಗಳು ಹಾಗೂ ಜೀಪುಗಳು ನಿತ್ಯ ಸಂಚರಿಸುತ್ತವೆ. ನೀವೂ ಒಮ್ಮೆ ಭೇಟಿ ನೀಡಿ ಮಲ್ಲಿಕಾರ್ಜುನನ ಕೃಪೆಗೆ ಪಾತ್ರರಾಗಿ.
ಬರಹ:ರೂರಲ್ ಟೂರಿಸ್ಟರ್ ಟೀಂ.