ಮನೋಖಿನ್ನತೆ… ಇದು ಬಹುತೇಕ ಎಲ್ಲರನ್ನೂ ಕಾಡಿರುವ ಭೂತ. ಇದರ ತೀಕ್ಷ್ಣತೆ ಹಲವರನ್ನು ಕುಗ್ಗಿಸಿಬಿಟ್ಟರೆ ಮನೋ ದಾರ್ಢ್ಯತೆ, ಛಲ ಮತ್ತು ಹೊಣೆಗಾರಿಕೆಗಳಿಂದ ಬದ್ಧರಾದ ವ್ಯಕ್ತಿಗಳು ಅದರಿಂದ ಹೊರಬಂದು ಜಗತ್ತನ್ನೇ ಬೆರಗುಗೊಳಿಸುವಂತಹ ಸಾಧನೆ ಮಾಡಿ ಮಹಾಪುರುಷರು ಎನಿಸುತ್ತಾರೆ. ಇಂತಹವರ ಸಾಲಿನಲ್ಲಿ ಅಚ್ಚರಿಪಡುವಂತಹ ವ್ಯಕ್ತಿ ಎಂದರೆ ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್.! ಆಧುನಿಕ ಪ್ರಜಾಪ್ರಭುತ್ವಕ್ಕೆ ಭಾಷ್ಯ ಬರೆದು, ಗುಲಾಮಗಿರಿಯನ್ನೇ ಹೊಡೆದೋಡಿಸಿದ ಅಜಾತಶತ್ರು. ಅಮೆರಿಕದ ಅಧ್ಯಕ್ಷರಾಗಿ ಆ ದೇಶದ ಆರ್ಥಿಕ ಪರಿಸ್ಥಿತಿ ಉನ್ನತ ಶೃಂಗಕ್ಕೇರಲು ಭದ್ರ ಬುನಾದಿ ಹಾಕಿದ ಅಬ್ರಹಾಂ ಲಿಂಕನ್ ಇಂದಿನ ರಾಜಕಾರಣಿಗಳಿಗೆ ಮಾದರಿ.
1809ರ ಫೆಬ್ರವರಿ 12ರಂದು ಕೆಂಟುಕಿಯ ಹಾಡ್ಜನ್‍ವಿಲ್ಲೆ ಎಂಬ ಗ್ರಾಮದಲ್ಲಿ ಜನಿಸಿದ ಲಿಂಕನ್ ಬೆಳೆದದ್ದು ಇಂಡಿಯಾನದಲ್ಲಿ. ಅಬ್ರಹಾಂ ಲಿಂಕನ್ ತನ್ನ ಅಧ್ಯಯನದ ಬಳಿಕ ನಡೆಸಿ ಕೆಲ ವರ್ಷಗಳ ಕಾಲ ವಕೀಲರಾಗಿಯೂ ಸೇವೆ ಸಲ್ಲಿಸಿದರು. ಇಲಿನಾಯ್ಸ್ ನ ಹೌಸ್ ಆಫ್ ರೆಪ್ರೆಸೆಂಟಿಟಿವ್ ಆಗಿ, ನಂತರ 1846ರಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟಿವ್ ಆದರು. ಇವರ ಆಡಳಿತ ಅವಧಿಯಲ್ಲಿ ದೇಶಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದ್ದಲ್ಲದೆ ಅಮೆರಿಕ ಆರ್ಥಿಕವಾಗಿ ಬಲಿಷ್ಠವಾಯಿತು.
6 ಅಡಿ 4 ಇಂಚು (6.4 ಅಡಿ) ಎತ್ತರದ ಅಜಾನುಬಾಹು ಲಿಂಕನ್ ದೈಹಿಕವಾಗಿ ಎಷ್ಟು ಸದೃಢರಾಗಿದ್ದರೆಂದರೆ ಒಮ್ಮೆ ಇವರು ಭಾಷಣ ಮಾಡುವ ಸಂದರ್ಭ ಇವರ ಬೆಂಬಲಿಗನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದ. ಇದನ್ನು ಕಂಡ ಲಿಂಕನ್ ಚಿರತೆಯಂತೆ ಆ ವ್ಯಕ್ತಿಯ ಮೇಲೆ ಹಾರಿ ಅವನ ಕೊರಳು ಮತ್ತು ಸೊಂಟ ಪಟ್ಟಿ ಹಿಡಿದು ಮೇಲಕೆತ್ತಿ ನೆಲಕ್ಕೆ ಒಗೆದುಬಿಟ್ಟಿದ್ದರು!
ಇಂತಹ ಅಬ್ರಹಾಂ ಲಿಂಕನ್ ಅವರಿಗೂ ಕೂಡ ಮನೋಖಿನ್ನತೆ ಎಂಬುದು ಬಿಡಲಿಲ್ಲ. ತನ್ನ 9ನೇ ವರ್ಷದಲ್ಲಿ ಕಾಯಿಲೆಯಿಂದ ತಾಯಿ ನಾನ್ಸಿ ಲಿಂಕನ್ ರನ್ನು ಕಳೆದುಕೊಂಡ ಬಳಿಕ 11 ವರ್ಷದ ಅಕ್ಕನ ಜವಾಬ್ದಾರಿಯೂ ಇವರ ಹೆಗಲ ಮೇಲೆ ಬಿತ್ತು. ಆದರೆ ಲಿಂಕನ್ ಅದನ್ನೆಲ್ಲ ಧೈರ್ಯದಿಂದ ಎದುರಿಸಿದರು. ಕೆಲವು ವರ್ಷಗಳ ನಂತರ ತನ್ನ ಅಕ್ಕನನ್ನೂ ಕಳೆದುಕೊಂಡರು.
ಲಿಂಕನ್ ಅವರು 23ನೇ ವಯಸ್ಸಿಗೆ ಬರುವಷ್ಟರಲ್ಲಿ ಇಂತಹ ಹಲವಾರು ದುರ್ಘಟನೆಗಳು ಎದುರಾಗಿದ್ದವು. ಆ ಸಂದರ್ಭ ಅವರು ಅಧೀರರಾಗಿಬಿಟ್ಟರು. ಆಗಲೇ ಅವರು ಖಿನ್ನತೆಗೊಳಗಾದರು. ಮನಸ್ಸನ್ನು ಚಿಂತೆ ಆವರಿಸಿತ್ತು. ಇದನ್ನು ತೊಲಗಿಸಲು ಅವರ ಸಂಗಾತಿಗಳಾಗಿದ್ದು ಪುಸ್ತಕಗಳು. ಕಿಂಗ್ ಜೇಮ್ಸ್ ಬೈಬಲ್, ಈಸೋಪನ ಕಥೆಗಳು, ಬುನ್ಯನ್ ಅವರ ದಿ ಫಿಲಿಗ್ರಿಮ್ಸ್ ಪ್ರೊಗ್ರೆಸ್, ಡಿಪೋ ಅವರ ರಾಬಿನ್‍ಸನ್ ಕ್ರೂಸೊ ವೀಮ್ಸ್ ಅವರ ದಿ ಲೈಫ್ ಆಫ್ ವಾಷಿಂಗ್ಟನ್, ಫ್ರಾಂಕ್ಲಿನ್ ಅವರ ಜೀವನ ಚರಿತ್ರೆ ಮುಂತಾದ ಪುಸ್ತಕಗಳನ್ನು ಓದಿ ಅದರಿಂದ ಸ್ಪೂರ್ತಿ ಪಡೆದು ಮತ್ತೆ ಫೀನಿಕ್ಸ್ ನಂತೆ ಎದ್ದು ನಿಂತರು. ಮುಂದೆ
ಅಮೆರಿಕ ಉಪಾಧ್ಯಕ್ಷರಾಗಿ ಹೆಸರು ಮಾಡಿದರು. ನಂತರ 1861ರ ಮಾರ್ಚ್‍ನಿಂದ 1865ರ ಏಪ್ರಿಲ್‍ನಲ್ಲಿ ಅವರ ಹತ್ಯೆಯಾಗುವವರೆಗೂ ಅಮೆರಿಕದ ಅತ್ಯಂತ ಜನಪ್ರಿಯ ಅಧ್ಯಕ್ಷರಾಗಿ ಚರಿತ್ರೆಯಲ್ಲಿ ಉಳಿದುಹೋದರು. ಸಣ್ಣ ಸಣ್ಣ ವಿಷಯಗಳನ್ನೂ ಗಂಭೀರವಾಗಿ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ, ಬದುಕನ್ನೇ ನಾಶ ಪಡಿಸಿಕೊಳ್ಳುವ ಈಗಿನ ಯುವ ಪೀಳಿಗೆಗೆ ಅಬ್ರಾಹಂ ಲಿಂಕನ್ ದಾರಿ ದೀಪವಾಗಬೇಕಿದೆ. ಇಂತಹ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ನಾವು ಮುನ್ನಡೆಯಬೇಕಾಗಿದೆ.
ಸಂಗ್ರಹದಿಂದ: ಟೀಂ ರೂರಲ್ ಟೂರಿಸ್ಟರ್.