ಕಾಶ್ಮೀರ… ಭೂಲೋಕದ ಸ್ವರ್ಗಕ್ಕೆ ಮನಸೋಲದವರೇ ಇಲ್ಲ. ಸದಾ ಹಿಮದಿಂದ ಆವೃತ್ತವಾಗಿರುವ ಈ ಕಣಿವೆ ರಾಜ್ಯದಲ್ಲಿ ಈ ಚಳಿಗಾಲ ಮತ್ತೊಂದು ವಿಶಿಷ್ಟ ಆಕರ್ಷಣೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದುವೇ ಗುಲ್ಮಾರ್ಗ್ ನ ಇಗ್ಲೂ ಕೆಫೆ(ಹಿಮ ಕೆಫೆ). ಚಳಿಗಾಲದ ಸೀಸನ್ ನಲ್ಲಿ ಎತ್ತ ನೋಡಿದರೂ ಹಿಮ. ಅದರಲ್ಲೂ ಕಣಿವೆ ರಾಜ್ಯದ ಗುಲ್ಮಾರ್ಗ್ ಕ್ಕೆ ಚಳಿಗಾಲದಲ್ಲಿ ಪ್ರವಾಸಿಗರು ಭೇಟಿ ನೀಡುವ ನೆಚ್ಚಿನ ತಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ಗುಲ್ಮಾರ್ಗ್ ನಲ್ಲಿ ಇಗ್ಲೋ ಕೆಫೆ ತಲೆ ಎತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಕೊರೊನಾದಿಂದಾಗಿ ಸಾಕಷ್ಟು ಹೊಡೆತ ತಿಂದಿದ್ದ ಪ್ರವಾಸೋದ್ಯಮ ಕ್ಷೇತ್ರ ಕಾಶ್ಮೀರದಲ್ಲಿ ಈಗ ಕೊಂಚ ಚೇತರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಜೊತೆಗೆ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡಲು ಪ್ರಯತ್ನಿಸುತ್ತಿದ್ದಾರೆ.
ಕೆಫೆ ನಿರ್ಮಾಣ ಹಂತದಲ್ಲಿ
ಇದರ ಭಾಗವಾಗಿ ಗುಲ್ಮಾರ್ಗ್ ನ ಕೊಲಹೋಯಿ ಸ್ಕೀ ರೆಸಾರ್ಟ್ ನಲ್ಲಿ ದೇಶದ ಮೊದಲ ಇಗ್ಲೋ ಕೆಫೆಯನ್ನು ತೆರೆಯಲಾಗಿದೆ. ಈ ಇಗ್ಲೋ ಕೆಫೆಯಲ್ಲಿ ಕುಳಿತು ಎಂಜಾಯ್ ಮಾಡಲು ಜನ ಮುಗಿಬೀಳುತ್ತಿದ್ದಾರೆ. ನೀವೂ ಒಂದುಸಲ ಈ ಕೆಫೆಗೆ ಭೇಟಿ ಕೊಟ್ಟರೆ ರೋಮಾಂಚಕ ಅನುಭವ ನಿಮ್ಮದಾಗುವುದರಲ್ಲಿ ಸಂದೇಹವಿಲ್ಲ.
ಸಂಗ್ರಹ: ಪ್ರಸಾದ್ ಕೋಲ್ಚಾರ್