ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದಟ್ಟ ಕಾನನ ಪ್ರದೇಶ, ಪುಷ್ಪಗಿರಿಯ ಹಚ್ಚ ಹಸಿರಿನ ನಡುವೆ ಭೋರ್ಗರೆವ ಸದ್ದಿನೊಂದಿಗೆ ನಯನ ಮನೋಹರವಾಗಿ ತನ್ನ ಸೌಂದರ್ಯ ರಾಶಿಯನ್ನು ಹರಿಸುತ್ತಾ, ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಮನಮೋಹಕ ಜಲಧಾರೆ ಮಲ್ಲಳ್ಲಿ ಫಾಲ್ಸ್ ಪ್ರಕೃತಿಯ ರಮಣೀಯತೆಯ ಕೈಗನ್ನಡಿ.
ಸುಮಾರು 250 ರಿಂದ 300 ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ಜಲರಾಶಿಯ ದೃಶ್ಯ ಸುಂದರ ಅನುಭವವನ್ನು ಮನಸ್ಸಿಗೆ ನೀಡುತ್ತದೆ. ಸೋಮವಾರ ಪೇಟೆಯ ಹಂಚಿಹಳ್ಳಿ ಗ್ರಾಮದಲ್ಲಿನ ಈ ಜಲಪಾತಕ್ಕೆ ನಡೆದುಕೊಂಡೇ ಹೋಗಬೇಕು. ದಾರಿಯು ಕಿರಿದಾಗಿದ್ದು, ಯಾವುದೇ ವಾಹನ ಇಲ್ಲಿಗೆ ಹೋಗುವುದಿಲ್ಲ. ಮಳೆಗಾಲವು ಮಲ್ಲಳ್ಳಿ ಜಲಪಾತದ ವೈಭವವನ್ನು ತುಂಬಿಕೊಳ್ಳಲು ಉತ್ತಮವಾದ ಕಾಲ.
ಬೇಸಿಗೆಯಲ್ಲಿ ನದಿ ಬತ್ತಿ ಹೋಗುವ ಕಾರಣ, ಮಲ್ಲಳ್ಳಿ ಫಾಲ್ಸ್ ನೋಡ ಸಿಗಲಾರದು. ಮಳೆಗಾಲದಲ್ಲಿ ತನ್ನೆಲ್ಲಾ ಶಕ್ತಿಯನ್ನು ಒಂದಾಗಿಸಿ ರಭಸದಿಂದ ಹಾಲ್ನೊರೆಯಾಗಿ ನೀರು ಧುಮುಕುವುದನ್ನು ನೋಡುವುದೇ ಆನಂದ. ನೀರಿನ ಅಬ್ಬರಕ್ಕೆ ಮಂಜಿನ ಪದರವೊಂದು ನಿರ್ಮಾಣಗೊಂಡು ಪ್ರಕೃತಿ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಮಡಿಕೇರಿಯಿಂದ ಸೋಮರವಾರಪೇಟೆ ಮಾರ್ಗವಾಗಿ ಹೋಗುವವರಿಗೆ ಸುಮಾರು 55 ಕಿ.ಮೀ, ಸುಬ್ರಹ್ಮಣ್ಯ ದಿಂದ ಬಿಸಿಲೆ ಮಾರ್ಗವಾಗಿ ಮಲ್ಲಳ್ಳಿಗೆ ಹೋಗುವವರಿಗೆ ಸುಮಾರು 50 ಕಿ..ಮೀ ಪ್ರಯಾಣಿಸಬೇಕಾಗುತ್ತದೆ.
ಇಲ್ಲಿಗೆ ಬಸ್ ವ್ಯವಸ್ಥೆ ಕಡಿಮೆ ಇರುವುದರಿಂದ ಸ್ವಂತ ವಾಹನವಿದ್ದಲ್ಲಿ ಬಹಳ ಅನುಕೂಲ. ತಿನ್ನಲು, ಕುಡಿಯಲು ಸಣ್ಣ ಪುಟ್ಟ ಅಂಗಡಿ ವ್ಯವಸ್ಥೆ ಇದೆ. ಹೊಟೇಲ್ ವ್ಯವಸ್ಥೆಗೆ ಸೋಮವಾರಪೇಟೆಯನ್ನು ಅವಲಂಬಿಸಬೇಕಾಗುತ್ತದೆ. ನೀವೂ ಒಂದ್ಸಾರಿ ಮಲ್ಲಳ್ಳಿಗೆ ಭೇಟಿ ನೀಡಿ ಅದರ ಸೌಂದರ್ಯವನ್ನು ಅನುಭವಿಸಿ.