ಬೆಂಗಳೂರು, ಸೆ. 09: ಕರ್ನಾಟಕದ ಮನೆ ಮಾತನಾಗಿರುವ ಟಿವಿ ನಿರೂಪಕಿ ಕಂ ನಟಿ ಅನುಶ್ರೀ ಮಾದಕ ವಸ್ತು ಸೇವನೆ ಮಾತ್ರವಲ್ಲ, ಅದನ್ನು ಸಾಗಾಟ ಮಾಡುತ್ತಿದ್ದಳು. 2007-08 ರಲ್ಲೇ ಎಕ್ಸೆಟೆಸಿ ಸಿಂಥೆಟಿಗ್ ಡ್ರಗ್ಸ್‌ನ್ನು ಅನುಶ್ರೀ ತನ್ನ ಗೆಳೆಯರ ಜತೆ ಸೇವನೆ ಮಾಡಿದ್ದಾಳೆ ಎಂಬುದು ಮಂಗಳೂಡು ಡ್ರಗ್ಸ್ ಪ್ರಕರಣದ ಎರಡನೇ ಆರೋಪಿ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಲ್ಲಿ ಬಹಿರಂಗಗೊಂಡಿದೆ.
ಅನುಶ್ರೀ ತನ್ನ ಗೆಳೆಯ ತರುಣ್ ಜತೆ ಸೇರಿ ರೂಮಿನಲ್ಲಿ ಮಾದಕ ವಸ್ತು ಸೇವನೆ ಮಾಡುತ್ತಿದ್ದ ಘಟನೆಗಳನ್ನು ಕಿಶೋರ್ ಅಮನ್ ಶೆಟ್ಟಿ ಉಲ್ಲೆಖಿಸಿ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ವಿಚಾರಣೆ ನಡೆಸಿದ್ದ ಮಂಗಳೂರು ಪೊಲೀಸರು, ದೋಷಾರೋಪ ಪಟ್ಟಿಯಲ್ಲಿ ಅನುಶ್ರೀ ಅವರ ಹೆಸರನ್ನು ಕೈ ಬಿಟ್ಟಿರುವುದು ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಸ್ಯಾಂಡಲ್ ವುಡ್ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿಯೇ ಮಂಗಳೂರು ಪೊಲೀಸರು ಕೂಡ ಡ್ರಗ್ ಜಾಲವನ್ನು ಪತ್ತೆ ಮಾಡಿದ್ದರು. ಅದು ಕೂಡ ಬೆಳ್ಳಿತೆರೆ ಹಾಗೂ ಕಿರಿತೆರೆಯ ಸೆಲಿಬ್ರಿಟಿಗಳ ಕೊರಳಿಗೆ ಉರುಳಾಗಿತ್ತು. ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ನಟಿ ಕಂ ನಿರೂಪಕಿ ಅನುಶ್ರೀ ವಿಚಾರಣೆ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ವಿಚಾರಣೆ ಎದುರಿಸಿದ್ದ ಅನುಶ್ರೀ ಕಣ್ಣೀರು ಹಾಕಿದ್ದರು.
ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರಿಲ್ಲ…!
ಮಂಗಳೂರು ಪೊಲೀಸರು ದಾಖಲಿಸಿರುವ ಡ್ರಗ್ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಅದರಲ್ಲಿ ಅನುಶ್ರೀ ಹೆಸರು ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಒಬ್ಬ ಆರೋಪಿ ಹೇಳಿದ ಕೂಡಲೇ ಮತ್ತೊಬ್ಬರನ್ನು ಅರೋಪಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುತ್ತದೆ ಕಾನೂನು. ಆದರೆ, ಒಬ್ಬ ಆರೋಪಿ ನೀಡಿದ ಹೇಳಿಕೆ ಸಂಬಂಧ ಸಾಂದರ್ಭಿಕ ಸಾಕ್ಷ್ಯಾಧಾರಗಳು ಲಭ್ಯವಾದರೆ ಆರೋಪಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆರೋಪಿ ಉಲ್ಲೇಖಿಸಿದ ಆರೋಪಿಯನ್ನು ಸಹ ಆರೋಪಿಯನ್ನಾಗಿ ಮಾಡಬೇಕಾಗುತ್ತದೆ. ಕಿಶನ್ ಅಮಾನ್ ಶೆಟ್ಟಿ ನೀಡಿರುವ ಹೇಳಿಕೆಗೂ ನಡೆದ ಘಟನಾವಳಿಗಳಿಗೆ ಸ್ವಾಮ್ಯತೆ ಇದ್ದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಅನುಶ್ರೀ ಅವರ ಹೆಸರನ್ನು ಕೈ ಬಿಟ್ಟರೇ? ಇಲ್ಲವೇ ಕಿಶನ್ ಅಮಾನ್ ಶೆಟ್ಟಿ ದುರುದ್ದೇಶ ಪೂರ್ವಕವಾಗಿ ಅನುಶ್ರೀ ಹೆಸರನ್ನು ಪ್ರಸ್ತಾಪಿಸಿದನೇ ಎಂಬುದು ಪ್ರಕರಣದ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.