ಸಮಗ್ರ ನ್ಯೂಸ್: 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಿಸಲಾಗಿದ್ದು, ರಾಜ್ಯಾದ್ಯಂತ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ ಈ ಬಾರಿ ಕರಾವಳಿ ಹಾಗೂ ಮಲೆನಾಡಿನಲ್ಲಿ ವ್ಯಾಪಕವಾಗಿ ಬೆಳೆಯುವ ಅಡಿಕೆ, ಕಾಳುಮೆಣಸು ಕೃಷಿಯ ನೋಂದಣಿ ಕಣ್ಮರೆಯಾಗಿದೆ. ಇದು ಬೆಳೆಗಾರರಿಗೆ ದಿಗಿಲು ಹುಟ್ಟಿಸುವಂತೆ ಮಾಡಿದೆ.
ಮುಸುಕಿನ ಜೋಳ (ನೀರಾವರಿ)(ಮಳೆಯಾಶ್ರಿತ), ಜೋಳ (ನೀರಾವರಿ)(ಮಳೆಯಾಶ್ರಿತ), ಸಜ್ಜೆ(ಮಳೆಯಾಶ್ರಿತ), ಸಾವೆ(ಮಳೆಯಾಶ್ರಿತ), ತೊಗರಿ(ಮಳೆಯಾಶ್ರಿತ), ಹುರುಳಿ(ಮಳೆಯಾಶ್ರಿತ), ಸೂರ್ಯಕಾಂತಿ(ನೀರಾವರಿ)(ಮಳೆಯಾಶ್ರಿತ), ಎಳ್ಳು(ಮಳೆಯಾಶ್ರಿತ), ನೆಲಗಡಲೆ(ಶೇಂಗಾ)(ನೀರಾವರಿ) (ಮಳೆಯಾಶ್ರಿತ), ಹತ್ತಿ(ನೀರಾವರಿ)(ಮಳೆಯಾಶ್ರಿತ), ಟೊಮ್ಯಾಟೋ, ಈರುಳ್ಳಿ(ಮಳೆಯಾಶ್ರಿತ), ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ) ಬೆಳೆಗಳಿಗೆ ವಿಮೆ ನೊಂದಣಿಗೆ 2024ರ ಜುಲೈ 31 ಕೊನೆಯ ದಿನವಾಗಿದೆ. ಭತ್ತ (ನೀರಾವರಿ) ರಾಗಿ(ನೀರಾವರಿ) (ಮಳೆಯಾಶ್ರಿತ), ನವಣೆ (ಮಳೆಯಾಶ್ರಿತ) ಬೆಳೆಗಳ ವಿಮಾ ನೊಂದಣಿಗೆ 2024ರ ಆಗಸ್ಟ್ 16 ಕೊನೆಯ ದಿನ.
ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು. ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚೆ ಪಡದೇ ಇದ್ದಲ್ಲಿ, ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.
ಆರ್ಥಿಕ ಸಂಸ್ಥೆಗಳು, ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿದಾಗ ಬೆಳೆ ವಿಮೆ ಪ್ರಸ್ತಾವನೆಯನ್ನು ಹಾಗೂ ವಿಮಾ ಕಂತನ್ನು ನಿಗಧಿತ ಸಮಯದೊಳಗೆ ನಿಯಮಾನುಸಾರ ಅನುಷ್ಟಾನ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳತಕ್ಕದ್ದು, ನೋಂದಣಿ ಪ್ರಕ್ರಿಯೆಯ ಹಂತದಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ನಿರ್ಲಕ್ಷದಿಂದ ಯಾವುದೇ ಲೋಪ ದೋಷಗಳು ಉಂಟಾದಲ್ಲಿ ಅದರಿಂಗಾಗುವ ಬೆಳೆ ವಿಮೆ ಪರಿಹಾರ ವ್ಯಾಜ್ಯಗಳಿಗೆ ಸಂಬಂಧಿಸಿದ ಸಂಸ್ಥೆಗಳೆ ನೇರ ಹೊಣೆಗಾರರಾಗಿರುತ್ತಾರೆ ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಅಡಿಕೆ, ಕಾಳುಮೆಣಸು ಗತಿ ಏನು?
2023-24ನೇ ಹಂಗಾಮಿನಲ್ಲೂ ಅಡಿಕೆ, ಕಾಳುಮೆಣಸು ನೋಂದಣಿ ಕುರಿತು ಚರ್ಚೆಯಾಗಿತ್ತು. ಕೊನೆಕ್ಷಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಹೋರಾಟದ ಫಲವಾಗಿ ನೋಂದಣಿ ಮಾಡಲು ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಈ ಬಾರಿ ಮತ್ತೆ ಅದೇ ಸ್ಥಿತಿ ಪುನರಾವರ್ತನೆಯಾಗಿದೆ.
ಈ ಬಾರಿಯೂ ಈ ಎರಡು ಬೆಳೆಗಳನ್ನು ನೋಂದಣಿ ಪ್ರಕ್ರಿಯೆಯಿಂದ ಕೈಬಿಡಲಾಗಿದ್ದು, ಈ ಕುರಿತಂತೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಸಾಮಾನ್ಯವಾಗಿ ಜು.31ರ ಒಳಗೆ ಈ ಬೆಳೆಗಳಿಗೆ ವಿಮಾ ಕಂತು ತುಂಬಲು ಅವಕಾಶ ಇರುತ್ತಿತ್ತು. ಆದರೆ ಈ ಬಾರಿ ಅಧಿಸೂಚನೆ ಹೊರಡಿಸದೇ ಇರುವುದು ಬೆಳೆಗಾರರನ್ನು ಆತಂಕಕ್ಕೆ ದೋಡಿದೆ.
“ಕಳೆದ ವರ್ಷ ತಡವಾಗಿಯಾದರೂ ನೋಂದಣಿ ಮಾಡಲಾಗಿತ್ತು. ಈ ಬಾರಿ ನೊಟಿಫಿಕೇಶನ್ ಹೊರಡಿಸಿಲ್ಲ. ಫಸಲ್ ಭೀಮಾ ಯೋಜನೆ ರೈತರ ಕೈಹಿಡಿಯುವ ಯೋಜನೆಯಾಗಿದ್ದು, ಅಡಿಕೆ, ಕಾಳುಮೆಣಸನ್ನು ಈ ಯೋಜನೆಗೆ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು” – ಪ್ರದೀಪ್ ಕಳಿಗೆ, ಕೃಷಿಕ, ಸುಬ್ರಹ್ಮಣ್ಯ