ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ರಿಕ್ರಿಯೇಷನ್ ಕ್ಲಬ್‌ಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಕಾರಣದಿಂದ ಜಿಲ್ಲೆಯಲ್ಲಿನ ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಇಸ್ಪೀಟ್ ಕಾರ್ಡ್ ಆಟವಾಡುವ ವೇಳೆ, ಕಾರ್ಡ್‌ಗಳನ್ನು ಒಬ್ಬರು ಮತ್ತೊಬ್ಬರಿಗೆ ನೀಡುವ ಸಂದರ್ಭ ಕೋವಿಡ್ ಸೋಂಕು ಸಾಂಕ್ರಾಮಿಕವಾಗಿ ಪಸರಿಸುವ ಸಾಧ್ಯತೆಗಳು ಹೆಚ್ಚಾಗಿರುವುದು ಗಮನಿಸಲಾಗಿದೆ. ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಇಸ್ಪೀಟ್ ಆಡುವಾಗ ಕನಿಷ್ಠ ಒಂದು ಮೀಟರ್ ಸುರಕ್ಷಿತ ಅಂತರ ಸಾಧ್ಯತೆ ಇಲ್ಲ. ಇಸ್ಪೀಟ್ ಕಾರ್ಡ್ ಆಡುವಾಗ ಒಬ್ಬರಿಂದ ಮತ್ತೊಬ್ಬರಿಗೆ ಕಾರ್ಡ್‌ಗಳನ್ನು ಹಂಚುವ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ಇದ್ದಲ್ಲಿ ಅವರ ಮೂಲಕ ಸೋಂಕು ಹರಡುವ ಸಾಧ್ಯತೆ ಅಧಿಕವಿದೆ.
ಆಟದಲ್ಲಿ ಭಾಗವಹಿಸುವ ವ್ಯಕ್ತಿಗಳಲ್ಲಿ ಆಟದ ಕಡೆ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಅವರಲ್ಲಿ ಉದ್ವೇಗ, ಕೋಪ, ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ. ರಿಕ್ರಿಯೇಷನ್ ಕ್ಲಬ್‌ಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಸೋಂಕು ಹರಡುವ ಸಾಧ್ಯತೆಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಕ್ಲಬ್‌ಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
🔸ಸಂಜಿರ ಮಾಡುವ ಬಗ್ಗೆ ತಿಳಿದುಕೊಳ್ಳಿ